ಮಂತ್ರಾಲಯ, ಸೆ.27: ಉತ್ತರಾಧಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ರಸ್ತೆ ಅಪಘಾತಕ್ಕೀಡಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಶ್ರೀ ಸತ್ಯಾತ್ಮತೀರ್ಥರು ತಮ್ಮ 31ನೇ ಚಾತುರ್ಮಾಸ್ಯ ವ್ರತವನ್ನು ಧಾರವಾಡದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ, ನವದ್ವಾದಶಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ರಸ್ತೆ ಅಪಘಾತ ಸಂಭವಿಸಿರುವ ವಿಷಯ ತಿಳಿಯುತ್ತಿದ್ದಂತೆಯೇ ಅವರ ಆರೋಗ್ಯದ ಕುರಿತು ದೂರವಾಣಿ ಮೂಲಕ ವಿಚಾರಿಸಿರುವುದಾಗಿ ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಪಘಾತದಲ್ಲಿ ಶ್ರೀಗಳಿಗೆ ಸ್ವಲ್ಪ ಗಾಯಗಳಾಗಿದ್ದು, ಗಂಭೀರ ಸ್ವರೂಪದ ತೊಂದರೆ ಇಲ್ಲ ಎಂಬ ಮಾಹಿತಿ ತಿಳಿದು ಸಮಾಧಾನವಾಗಿದೆ ಎಂದು ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.
ಶ್ರೀ ಸತ್ಯಾತ್ಮತೀರ್ಥರನ್ನು ಖುದ್ದಾಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸುವ ಉದ್ದೇಶದಿಂದ ಹುಬ್ಬಳ್ಳಿಗೆ ತೆರಳುವುದಾಗಿಯೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಸತ್ಯಾತ್ಮತೀರ್ಥರು ಶೀಘ್ರ ಗುಣಮುಖರಾಗಿ, ಮೊದಲಿನಂತೆ ಪಾಠ, ಪ್ರವಚನ ಹಾಗೂ ದೈನಂದಿನ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಸಂಸ್ಥಾನ ಪೂಜಾರಾಧನೆಯ ಸಂದರ್ಭದಲ್ಲಿ ಉಪಾಸ್ಯಮೂರ್ತಿ ಶ್ರೀ ಮೂಲರಾಮದೇವರು ಹಾಗೂ ಶ್ರೀ ಗುರುಸಾರ್ವಭೌಮರಲ್ಲಿ ಪ್ರಾರ್ಥಿಸಿರುವುದಾಗಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.



