ರಾಯಚೂರು, ನ.4: ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಒಂದು ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿರುವ ಎಸ್‌ಐಆರ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮಾರೆಪ್ಪ ಹರ್ವಿ, ರಾಜ್ಯ ಸರ್ಕಾರವು ಎಸ್‌ಐಆರ್ ಅಂತಿಮ ಪಟ್ಟಿಯನ್ನು ತಿರಸ್ಕರಿಸಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಅದನ್ನು ಬಳಸಬಾರದು ಎಂದು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಎಸ್‌ಐಆರ್ ಪ್ರಕ್ರಿಯೆ ರದ್ದತಿಗಾಗಿ ಆರಂಭಿಸಿರುವ ಹೋರಾಟವು ಬೇಡಿಕೆಗಳು ಈಡೇರುವವರೆಗೂ ಮುಂದುವರಿಯಲಿದೆ ಎಂದು ತಿಳಿಸಿದರು.

2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಎಸ್‌ಐಆರ್ ಅಂತಿಮ ಪಟ್ಟಿಯಲ್ಲಿ ಸುಮಾರು 6.5 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದರೆ, 1.06 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಮೃತಪಟ್ಟವರು ಹಾಗೂ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿರುವವರ ಸಂಖ್ಯೆ ಸುಮಾರು 25 ಲಕ್ಷ ಎಂದು ಚುನಾವಣಾ ಆಯೋಗವೇ ತಿಳಿಸಿದೆ. ಹಾಗಾದರೆ ಉಳಿದ ಸುಮಾರು 75 ಲಕ್ಷ ಮತದಾರರ ಹೆಸರುಗಳನ್ನು ಯಾವ ಆಧಾರದ ಮೇಲೆ ಕೈಬಿಡಲಾಗಿದೆ ಎಂಬುದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಶೇ.43ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನಾಗರಿಕ ಮತ ಕಾವಲು ಸಮಿತಿಯು ರಾಜ್ಯದ ವಿವಿಧೆಡೆ ನಡೆಸಿದ ಮತಗಟ್ಟೆಮಟ್ಟದ ಪರಿಶೀಲನೆಯಲ್ಲಿ, ತಮ್ಮ ವಿಳಾಸದಲ್ಲೇ ವಾಸಿಸುತ್ತಿರುವವರನ್ನು ಸ್ಥಳಾಂತರಗೊಂಡಿದ್ದಾರೆಂದು ಹಾಗೂ ಜೀವಂತವಾಗಿರುವ ಕೆಲವರನ್ನು ಮೃತಪಟ್ಟಿದ್ದಾರೆಂದು ದಾಖಲಿಸಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಪಿಸಿದರು.

ದೇಶಾದ್ಯಂತ ಎಸ್‌ಐಆರ್ ವಿರುದ್ಧ ವಿರೋಧ ಪಕ್ಷಗಳು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಕೆಲವು ಸಚಿವರು ಈ ಪ್ರಕ್ರಿಯೆಯನ್ನು ಸಮರ್ಥಿಸುವ ರೀತಿಯಲ್ಲಿ ಮಾತನಾಡುತ್ತಿರುವುದು ವಿಷಾದನೀಯ. ತಮ್ಮ ಜಿಲ್ಲೆ ಅಥವಾ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂಬ ಹೇಳಿಕೆಗಳು ಸರಿಯಲ್ಲ. ಈ ದ್ವಂದ್ವ ನಿಲುವಿನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಎಸ್‌ಐಆರ್ ರದ್ದತಿಗೆ ಒತ್ತಾಯಿಸಿ ಇಂಡಿಯಾ ಒಕ್ಕೂಟದ ರಾಜಕೀಯ ಪಕ್ಷಗಳು ನವೆಂಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಎಸ್‌ಐಆರ್ ವಿರೋಧಿ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ. ಪ್ರಜಾಪ್ರಭುತ್ವ ಮತ್ತು ಮತದಾರರ ಹಕ್ಕುಗಳ ರಕ್ಷಣೆಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಎಸ್‌ಐಆರ್ ಪಟ್ಟಿಯನ್ನು ಬಳಸಬಾರದು. ಬದಲಾಗಿ ರಾಜ್ಯ ಚುನಾವಣಾ ಆಯೋಗದ ಮೂಲಕ ಪ್ರತಿಯೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಪರಿಶೀಲನಾ ಸಭೆಗಳನ್ನು ನಡೆಸಿ, 2025ರ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಬಳಸಬೇಕು. ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಅರ್ಹ ಮತದಾರರಿಗೆ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ. ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಮಾರೆಪ್ಪ ಹರ್ವಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಚಾಮರಾಜ ಮಾಲಿಪಾಟೀಲ್, ಎಂ.ಆರ್. ಬೆರಿ, ಖಾಜಾ ಅಸ್ಲಾಂ ಅಹಮದ್, ಬಸವರಾಜ್, ಶಾಂತಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.