ರಾಯಚೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1ರಂದು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ‘ಮಿಸ್ಟರ್ ಕರ್ನಾಟಕ ರತ್ನ–2026’ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ದೇಹದಾರ್ಢ್ಯ ಪಟುಗಳು ಭಾಗವಹಿಸಲಿದ್ದಾರೆ ಎಂದು ರಾಯಚೂರು ಜಿಲ್ಲಾ ದೇಹದಾರ್ಢ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಲ್. ಸುಧಾಕರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ಎಸ್. ಬೋಸರಾಜು ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನವೆಂಬರ್ 1ರಂದು ಸಂಜೆ 6 ಗಂಟೆಯಿಂದ ಸ್ಪರ್ಧೆಗಳು ಆರಂಭವಾಗಲಿವೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 200ರಿಂದ 300 ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ತಮ್ಮ ದೈಹಿಕ ಸಾಮರ್ಥ್ಯ, ಕಠಿಣ ಪರಿಶ್ರಮ ಹಾಗೂ ದೇಹದಾರ್ಢ್ಯ ಕೌಶಲ್ಯವನ್ನು ಪ್ರದರ್ಶಿಸಲು ಈ ವೇದಿಕೆ ಅವಕಾಶ ಕಲ್ಪಿಸಲಿದೆ ಎಂದರು.

ದೇಹದಾರ್ಢ್ಯ ಕ್ರೀಡೆಯ ಬಗ್ಗೆ ಯುವಜನರಲ್ಲಿ ಆಸಕ್ತಿ ಬೆಳೆಸುವುದು, ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದು ಹಾಗೂ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ. ರಾಜ್ಯಮಟ್ಟದ ಸ್ಪರ್ಧೆ ರಾಯಚೂರಿನಲ್ಲಿ ನಡೆಯುತ್ತಿರುವುದು ಸ್ಥಳೀಯ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶವಾಗಲಿದೆ ಎಂದು ಹೇಳಿದರು.

ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳನ್ನು ನಿಗದಿಪಡಿಸಲಾಗಿದೆ. ಪ್ರಥಮ ಸ್ಥಾನ ಗಳಿಸುವ ಸ್ಪರ್ಧಿಗೆ ₹55,555, ದ್ವಿತೀಯ ಸ್ಥಾನಕ್ಕೆ ₹22,222 ಹಾಗೂ ತೃತೀಯ ಸ್ಥಾನಕ್ಕೆ ₹11,111 ನಗದು ಪುರಸ್ಕಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರವಿ ಬೋಸರಾಜು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರಂ ಸಿಂಗ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಆರ್.ವಿ. ಫಿಟ್ನೆಸ್ ಕ್ಲಬ್, ಪವರ್ ಫಿಟ್ನೆಸ್ ಸಂಘಟನೆ, ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಹಾಗೂ ರಾಯಚೂರು ಜಿಲ್ಲಾ ದೇಹದಾರ್ಢ್ಯ ಸಂಘದ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಿಷಬ್ ವೈಶಿಷ್ಟ, ವಿಶ್ವನಾಥ್, ಹರ್ಷ ಹಾಗೂ ಆಕಾಶ್ ಉಪಸ್ಥಿತರಿದ್ದರು.