ರಾಯಚೂರು, ಅ.31: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಭೂ ಖರೀದಿ ಯೋಜನೆಯಡಿ ರಾಯಚೂರು ಜಿಲ್ಲೆಯಲ್ಲಿ ಸುಮಾರು ₹24 ಕೋಟಿ ಮೊತ್ತದ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ರೈತ ರಕ್ಷಕ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಿ.ಟಿ. ಗಂಭೀರ ಆರೋಪ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು, ಮಾನ್ವಿ, ಸಿರವಾರ ಹಾಗೂ ಸಿಂಧನೂರು ತಾಲೂಕುಗಳಲ್ಲಿ ಭೂ ಖರೀದಿ ಯೋಜನೆಯ ಹೆಸರಿನಲ್ಲಿ ಅರ್ಹ ಫಲಾನುಭವಿಗಳಿಗೆ ವಂಚನೆ ಮಾಡಲಾಗಿದೆ. ಫಲವತ್ತಾದ ಕೃಷಿ ಭೂಮಿ ನೀಡುವುದಾಗಿ ನಂಬಿಸಿ, ಕೃಷಿಗೆ ಯೋಗ್ಯವಲ್ಲದ ಸವಳು ಹಾಗೂ ಜಾಲಿ ಗಿಡಗಳು ಬೆಳೆದಿರುವ ಜಮೀನುಗಳನ್ನು ಮಂಜೂರು ಮಾಡಲಾಗಿದೆ ಎಂದು ದೂರಿದರು.
2023–24ನೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಿಂದ ಸುಮಾರು 42 ಎಕರೆ ಭೂಮಿಗೆ ಅನುಮೋದನೆ ದೊರೆತಿತ್ತು. ಆದರೆ ನಂತರದ ವರ್ಷಗಳಲ್ಲಿ ಸಮಿತಿಯ ಅನುಮೋದನೆ ಪಡೆಯದೆಯೇ ಭೂ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಸಂಬಂಧಪಟ್ಟ ಕಂದಾಯ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದರು.
ಯೋಜನೆಯಡಿ ಸುಮಾರು 48 ಫಲಾನುಭವಿಗಳಿಂದ ತಲಾ ₹80 ಸಾವಿರದವರೆಗೆ ಹಣ ವಸೂಲಿ ಮಾಡಲಾಗಿದೆ. ವಾಸ್ತವದಲ್ಲಿ ₹4.50 ಲಕ್ಷ ಮೌಲ್ಯದ ಜಮೀನನ್ನು ನೋಂದಣಿ ದಾಖಲೆಗಳಲ್ಲಿ ₹12.50 ಲಕ್ಷ ಎಂದು ತೋರಿಸಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. ಫಲಾನುಭವಿಗಳ ಹೆಸರಿನಲ್ಲಿ ಸಾಲ ಮಂಜೂರು ಮಾಡಿಸಿ, ಹಣದ ಒಂದು ಭಾಗವನ್ನು ಮಧ್ಯವರ್ತಿಗಳು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಸುಮಾರು 240ರಿಂದ 250 ಎಕರೆ ಭೂಮಿಯ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಕೆಲವು ಫಲಾನುಭವಿಗಳ ಹೆಸರಿಗೆ ಜಮೀನು ನೋಂದಣಿಯಾಗಿದ್ದರೂ ಅವರಿಗೆ ವಾಸ್ತವಿಕವಾಗಿ ಜಮೀನು ಹಸ್ತಾಂತರವಾಗಿಲ್ಲ. ಭೂಮಿಗೆ ಸಂಬಂಧಿಸಿದ ದಾಖಲೆಗಳು, ಸಹಿಗಳು ಹಾಗೂ ಸಮಿತಿಯ ಕಡತಗಳನ್ನು ನಕಲಿ ಮಾಡಲಾಗಿದೆ ಎಂದು ದೂರಿದರು.
ನಿಗಮದ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಕುಮಾರ್ ಸೇರಿದಂತೆ ಆರೋಪ ಎದುರಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಿಗಮದ ಅಧ್ಯಕ್ಷ ಎಂ. ರಾಮಪ್ಪ ಅವರನ್ನು ಸ್ಥಾನದಿಂದ ಕೆಳಗಿಳಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ವಂಚನೆಗೊಳಗಾದ ಫಲಾನುಭವಿಗಳಿಗೆ ನೀರಾವರಿ, ವಿದ್ಯುತ್ ಹಾಗೂ ರಸ್ತೆ ಸೌಲಭ್ಯವಿರುವ ಕೃಷಿಯೋಗ್ಯ ಜಮೀನು ಒದಗಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಲತಾ, ಮಧು ಚಂದ್ರಶೇಖರ್, ಲಕ್ಷ್ಮಿ ವೀರೇಶ್, ನಾಗಮ್ಮ ರೆಡ್ಡಪ್ಪ, ಗಂಗಮ್ಮ ರಮೇಶ್, ಶಂಕ್ರಮ್ಮ ಸೇರಿದಂತೆ ಹಲವು ಫಲಾನುಭವಿಗಳು ಉಪಸ್ಥಿತರಿದ್ದರು.



