ಮಾನ್ವಿ: ಪಟ್ಟಣದ ಫ್ರೆಂಡ್ಸ್ ಫಂಕ್ಷನ್ ಹಾಲ್ನಲ್ಲಿ ನಡೆದ ಲಕ್ಷ್ಮೀ ಪತ್ತಿನ ಸೌಹಾರ್ದ ಸಹಕಾರಿ ಸಂಘದ 16ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಕರ್ನಾಟಕ ರಾಜ್ಯ ಕುರುಬರ ಸಂಘದ ರಾಜ್ಯಾಧ್ಯಕ್ಷ ಹಾಗೂ ಸಹಕಾರಿಯ ಅಧ್ಯಕ್ಷ ಎಂ. ಈರಣ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರ ಅಭಿವೃದ್ಧಿಯನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡು ಕೇವಲ ₹11 ಲಕ್ಷ ಬಂಡವಾಳದಿಂದ ಆರಂಭವಾದ ಸಹಕಾರಿ ಸಂಘವು ಇಂದು ಯಶಸ್ವಿಯಾಗಿ ಬೆಳೆದು ನಿಂತಿದೆ ಎಂದರು. ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಸಹಕಾರದ ಜೊತೆಗೆ ಸಂಘದಿಂದ ವಿವಿಧ ಸಾಲಗಳನ್ನು ಪಡೆದ ಸದಸ್ಯರು ಪ್ರಾಮಾಣಿಕವಾಗಿ ಮರುಪಾವತಿ ಮಾಡಿರುವುದರಿಂದ ಕಳೆದ 16 ವರ್ಷಗಳಿಂದ ಸಹಕಾರಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಪ್ರಸ್ತುತ ಸಹಕಾರಿಯಲ್ಲಿ 10 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದು, ₹110 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸಂಘವು ₹1.97 ಕೋಟಿ ನಿವ್ವಳ ಲಾಭ ಗಳಿಸಿದ್ದು, ಈ ಬಾರಿ ಸದಸ್ಯರಿಗೆ ಶೇ.15ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸಲಾಗಿದೆ ಎಂದು ಎಂ. ಈರಣ್ಣ ತಿಳಿಸಿದರು.
ಸಭೆಯಲ್ಲಿ ಸಹಕಾರಿಯೊಂದಿಗೆ ಉತ್ತಮ ವ್ಯವಹಾರ ನಡೆಸಿದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೀರಪ್ಪ ತಾತ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಹಕಾರಿಯ ಸಿಇಒ ಬಸವರಾಜ, ವ್ಯವಸ್ಥಾಪಕ ಜಗನ್ನಾಥ ಕುಮಾರ ಕೆ., ಉಪಾಧ್ಯಕ್ಷ ಡಿ. ಆದಿನಾರಾಯಣ, ಷಣ್ಮುಖಾಚಾರ, ಜಿ.ಬಿ. ಬೊಮ್ಮನಾಳ, ಬಚ್ಚಣ್ಣ ಕೆ. ಗುಡದಿನ್ನಿ, ಶಂಶೀರ್ ಖಾನ್, ಹನುಮಂತಪ್ಪ ಕಾಟ್ಟಿಕಾರ್, ಲಕ್ಷ್ಮೀಪತಿ ಪಾಟೀಲ್, ನರಸಪ್ಪ, ರಾಜೇಶ್ವರಿ, ಗೀತಾ, ಡಾ. ಪೂಜಾ, ಎಂ. ಶಿವಕುಮಾರ, ಬುಡ್ಡಣ್ಣ, ಈರಣ್ಣ, ಸಿದ್ರಾಮಪ್ಪ, ಬಸವರಾಜ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



