ಮಾನ್ವಿ: ಬರಗಾಲದ ಹಿನ್ನೆಲೆಯಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ತಾಲೂಕಿನ ನೀರಮಾನ್ವಿ ಗ್ರಾಮದ ರೈತರ ಪಂಪ್ಸೆಟ್ಗಳಿಗೆ ಪ್ರತಿದಿನ ನಿರಂತರವಾಗಿ 10 ತಾಸು ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತರು ತಹಶೀಲ್ದಾರ್ ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಜೆಲ್ಲಿ ಆಂಜನೇಯ್ಯ ಮಾತನಾಡಿ, ಬರಗಾಲದ ಪರಿಣಾಮ ಸಮರ್ಪಕವಾಗಿ ಮಳೆಯಾಗದೆ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಜಮೀನುಗಳಿಗೆ ಕಾಲುವೆ ನೀರು ಸಹ ದೊರೆಯದ ಕಾರಣ ಗ್ರಾಮದ ಬಹುತೇಕ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಕೊಳವೆಬಾವಿಗಳ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಜೆಸ್ಕಾಂನಿಂದ ಕೃಷಿ ಪಂಪ್ಸೆಟ್ಗಳಿಗೆ ಪ್ರತಿದಿನ ನಿಗದಿತ ಅವಧಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಮಳೆ ಹಾಗೂ ಕಾಲುವೆ ನೀರಿನ ಕೊರತೆಯಿಂದ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕೊಳವೆಬಾವಿಗಳ ಮೂಲಕ ನೀರು ಹಾಯಿಸಲು ಅಗತ್ಯವಾದ ವಿದ್ಯುತ್ ಕೂಡ ಸಮರ್ಪಕವಾಗಿ ದೊರೆಯದಿದ್ದರೆ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಆದ್ದರಿಂದ ರೈತರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಪಂಪ್ಸೆಟ್ಗಳಿಗೆ ನಿರಂತರವಾಗಿ 10 ತಾಸು ವಿದ್ಯುತ್ ಪೂರೈಸಲು ಜೆಸ್ಕಾಂ ಅಧಿಕಾರಿಗಳಿಗೆ ತಾಲೂಕು ಆಡಳಿತ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಬೇಡಿಕೆಗೆ ಸ್ಪಂದಿಸದಿದ್ದರೆ ನೀರಮಾನ್ವಿ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಿಂದ ಮಾನ್ವಿ ತಹಶೀಲ್ದಾರ್ ಕಚೇರಿವರೆಗೆ ನೂರಾರು ರೈತರು ಅರೆಬೆತ್ತಲೆ ಮೆರವಣಿಗೆ ನಡೆಸಿ ಪ್ರತಿಭಟನೆ ಮಾಡಲಾಗುವುದು. ನಂತರದ ಹಂತದಲ್ಲಿ ನೀರಮಾನ್ವಿ ಗ್ರಾಮದ ಸಮೀಪ ರಸ್ತೆ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನೀರಮಾನ್ವಿ ಗ್ರಾಮದ ರೈತರಾದ ಶ್ರೀರಾಮುಲುಗೌಡ, ಜೆ. ಭೀಮರಾಯ, ಲಿಂಗಪ್ಪ ಕನ್ನೇರಿ, ರಮೇಶ, ಚಿದಾನಂದ, ಮಹೇಶ್, ಮಲ್ಲಿಕಾರ್ಜುನ, ಶಿವರಾಜ, ಬಂದೇನವಾಜ್, ವೀರನಗೌಡ, ರವಿ ಅಟ್ಲೂರು, ರಂಗಪ್ಪ, ಶಿವಕುಮಾರ, ಮುದುಕಪ್ಪ ಆಚಾರ್, ಬೂದೇಪ್ಪ, ಮಲ್ಲಪ್ಪ ಪೂಜಾರಿ, ಉಸ್ಮನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



