ಸದ್ಗುರು ಸಮರ್ಥ ಕಲಿಯುಗದ ಕಲ್ಪವೃಕ್ಷ ಶ್ರೀ ಸಚ್ಚಿದಾನಂದ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಅ.10ರಂದು ಶ್ರೀಮಠದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಶರಣಗೌಡ ಬಕ್ರಿ ಗೌರಂಪೇಟ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಕನ್ನೂರ ಶ್ರೀಮಠದಲ್ಲಿ ಪ್ರಭು ಶ್ರೀ ಕುಮಾರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಅ.7ರಿಂದ 10ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿದಿನ ಕರ್ಥೃಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಜ್ಞಾನಯಜ್ಞ ಸಪ್ತಾಹ ನಡೆಯಲಿದೆ. ಅ.8ರಂದು ನಡೆಯುವ ಶ್ರವಣ ಭಕ್ತಿ ದಾಸಬೋಧ ಕಾರ್ಯಕ್ರಮದಲ್ಲಿ ಯಂಕಂಚಿಯ ಪಂಡಿತರತ್ನ ವೀರಭದ್ರಯ್ಯ ಶಾಸ್ತ್ರಿಗಳು ಪ್ರವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಅ.9ರಂದು ಅಮಾತೆಪ್ಪ ರಾಮನಾಳ ಹಾಗೂ ಸದಾಶಿವಪ್ಪ ಶರಣರ ಪ್ರವಚನ ನಡೆಯಲಿದ್ದು, ಸಂಜೆ ಜಿನ್ನಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ.10ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳು, ಪ್ರವಚನ, ತುಲಾಭಾರ ಸೇವೆ ನಡೆಯಲಿವೆ. ಸಂಜೆ ಸಂಗೀತ ಶಿಕ್ಷಕ ಹನುಮಯ್ಯ ಪಿಲಿಗುಂಡ, ನೆಹರು ಹಂಚಿನಾಳ, ರಾಮಣ್ಣ ಗಬ್ಬರ, ಸಿದ್ದಲಿಂಗಪ್ಪ ಗಟ್ಟೂರ, ಈರಣ್ಣ ಹೂಗಾರ, ಹೊನ್ನಲಿಂಗ ರುದ್ರಾಕ್ಷಿ, ನಾದಲಹರಿ ಸಂಗೀತ ಮತ್ತು ನೃತ್ಯ ಶಾಲೆಯ ರಮೇಶ ಮಸರಕಲ್, ಮಲ್ಲಿಕಾರ್ಜುನ ಚನ್ನೂರ ಹಾಗೂ ಸುಭಾಷ ಬಿರಾದರ ತಂಡದಿಂದ ಸಂಗೀತ ಸೇವೆ ನಡೆಯಲಿದೆ ಎಂದರು.
ಜಾತ್ರೆಯ ಅಂಗವಾಗಿ ನಡೆಯುವ ಧರ್ಮಸಭೆಯಲ್ಲಿ ಸಚಿವರು, ಶಾಸಕರು, ವಿವಿಧ ರಾಜಕೀಯ ಮುಖಂಡರು ಹಾಗೂ ಮಠಾಧೀಶರು ಪಾಲ್ಗೊಳ್ಳಲಿದ್ದು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಶರಣಗೌಡ ಬಕ್ರಿ ಗೌರಂಪೇಟ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡ ರಂಗಣ್ಣಗೌಡ, ನಾಗರಾಜ ಪಾಟೀಲ್ ನಿಲೋಗಲ್ ಗೌರಂಪೇಟ, ರವಿ ದೇಸಾಯಿ, ವಕೀಲ ಮಲ್ಲನಗೌಡ ಗೆಜ್ಜೆಬಾವಿ, ಶರಣಬಸವ ರಾಮದುರ್ಗ, ರಂಗಣ್ಣ ಅಂಜಳ ಹಾಗೂ ನೂರಪ್ಪ ನಾಯ್ಕ ಉಪಸ್ಥಿತರಿದ್ದರು.



