ಮಾನ್ವಿ: ತಾಲೂಕಿನ ಹಿಂಗಾರು ಹಂಗಾಮಿನಲ್ಲಿ ಸರ್ಕಾರದ ಖರೀದಿ ಕೇಂದ್ರಗಳ ಮೂಲಕ ಜೋಳ ಮಾರಾಟ ಮಾಡಿರುವ ರೈತರಿಗೆ ಬಾಕಿ ಉಳಿದಿರುವ ₹109 ಕೋಟಿ ಹಣವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುತ್ತಿದೆ ಎಂದು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, 2025–26ನೇ ಸಾಲಿನಲ್ಲಿ ರಾಜ್ಯದ ರೈತರಿಂದ ಭತ್ತ, ರಾಗಿ, ಜೋಳ ಸೇರಿದಂತೆ ವಿವಿಧ ಆಹಾರಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗಿದ್ದು, ರೈತರಿಗೆ ಪಾವತಿಸಬೇಕಾದ ಬಾಕಿ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಬಿಡುಗಡೆಯಾಗಿರುವ ₹406 ಕೋಟಿ ಮೊತ್ತವನ್ನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಆವರ್ತ ನಿಧಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಜಮೆ ಮಾಡಲಾಗಿದೆ. ಈ ಅನುದಾನದ ಮೂಲಕ ಆಹಾರಧಾನ್ಯ ಮಾರಾಟ ಮಾಡಿದ ರೈತರಿಗೆ ಬಾಕಿ ಹಣ ಪಾವತಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ವಿಶೇಷವಾಗಿ ಮಾನ್ವಿ ತಾಲೂಕಿನ ಹಿಂಗಾರು ಹಂಗಾಮಿನಲ್ಲಿ ಜೋಳ ಬೆಳೆದು ಸರ್ಕಾರದ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿರುವ ರೈತರಿಗೆ ಒಟ್ಟು ₹109 ಕೋಟಿ ಬಾಕಿ ಹಣವನ್ನು ಡಿಬಿಟಿ ವ್ಯವಸ್ಥೆಯ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ರೈತರಿಗೆ ಹಣ ತಲುಪಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಕೃಷಿ ಚಟುವಟಿಕೆಗಳಿಗೆ ಬಂಡವಾಳ ಹೂಡಿಕೆ ಮಾಡಿ ಬೆಳೆ ಬೆಳೆದ ರೈತರು, ತಾವು ಮಾರಾಟ ಮಾಡಿದ ಜೋಳದ ಹಣಕ್ಕಾಗಿ ಕಾಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಈ ಕ್ರಮವು ರೈತರಿಗೆ ಆರ್ಥಿಕ ನೆರವಾಗಲಿದೆ. ಬಾಕಿ ಹಣ ಪಾವತಿಯಿಂದ ಮುಂದಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬೀಜ, ರಸಗೊಬ್ಬರ ಹಾಗೂ ಇತರೆ ಕೃಷಿ ಪರಿಕರಗಳ ಖರೀದಿಗೆ ಸಹಕಾರಿಯಾಗಲಿದೆ ಎಂದು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅಭಿಪ್ರಾಯಪಟ್ಟರು.