ಲಿಂಗಸುಗೂರು: ಯುವ ಮುಖಂಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಗೋವಿಂದರಾಜ್ ಎಚ್. ಅಮ್ಮಾಪುರ್ ಅವರ ಪುತ್ರ ಹರ್ಷಿತ್ ಜಿ. ಅಮ್ಮಾಪುರ್ ಅವರ ಪ್ರಥಮ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಹಾರ್ಡ್ ಟೆನ್ನಿಸ್ ಬಾಲ್ ಓಪನ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದು ಪಂದ್ಯಾವಳಿ ಆಯೋಜಕ ಪುರುಷೋತ್ತಮ ಭಂಡಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷೋತ್ತಮ ಭಂಡಾರಿ ಕರಡಕಲ್ ಹಾಗೂ ರೈಸಿಂಗ್ ಸ್ಟಾರ್ ಕ್ರಿಕೆಟ್ ಅಕಾಡೆಮಿ, ಲಿಂಗಸುಗೂರು ಕ್ರಿಕೆಟ್ ಬಳಗದ ವತಿಯಿಂದ ಅ.11ರಿಂದ ತಾಲೂಕು ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ. 10 ಓವರ್‌ಗಳ ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳ ತಂಡಗಳು ಹಾಗೂ ಆಟಗಾರರಿಗೆ ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ವಿಜೇತ ತಂಡಕ್ಕೆ ₹1,11,111 ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ₹55,555 ನಗದು ಮತ್ತು ಟ್ರೋಫಿ ನೀಡಲಾಗುವುದು. ಅಲ್ಲದೆ, ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ವಿವಿಧ ವಿಭಾಗಗಳಲ್ಲಿ ವಿಶೇಷ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು ಅ.8ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಪ್ರತಿ ತಂಡಕ್ಕೆ ₹2 ಸಾವಿರ ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ನೋಂದಣಿಗಾಗಿ 8867882357, 8792293747 ಹಾಗೂ 9380074368 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿದರು.

ಸುದ್ದಿಗೋಷ್ಠಿಯಲ್ಲಿ ಚಂದ್ರು ಹಿರೇಮಠ, ಅಜೀಂ ಪಟೇಲ್, ಸುಧಾಕರ ರೆಡ್ಡಿ, ಶರಣಬಸವ, ನಾಗರಾಜ ಗುತ್ತೇದಾರ, ಅಮನ್‌ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.