ಮಾನ್ವಿ: ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ಯೋಗ ಮತ್ತು ಪ್ರಾಣಾಯಾಮ ಸಹಕಾರಿಯಾಗಿದ್ದು, ಸಾರ್ವಜನಿಕರಲ್ಲಿ ಯೋಗಾಭ್ಯಾಸದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನವೆಂಬರ್ 11ರಿಂದ 15ರವರೆಗೆ ಐದು ದಿನಗಳ ಉಚಿತ ಯೋಗ ಮತ್ತು ಪ್ರಾಣಾಯಾಮ ವಿರಾಟ್ ಶಿಬಿರ ಆಯೋಜಿಸಲಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ತಾಲೂಕು ಸಂಚಾಲಕ ಕುಮಾರಸ್ವಾಮಿ ಮೇದಾ ತಿಳಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಬಿರದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪಟ್ಟಣದ ಶ್ರೀ ಪಂಪಾ ವಿರೂಪಾಕ್ಷೇಶ್ವರ ಅನುದಾನಿತ ಹಿರಿಯ ಪ್ರೌಢಶಾಲೆಯ ಆವರಣದಲ್ಲಿ ಪ್ರತಿದಿನ ಬೆಳಗ್ಗೆ 5.30ರಿಂದ 7 ಗಂಟೆಯವರೆಗೆ ಶಿಬಿರ ನಡೆಯಲಿದೆ. ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಹಾಗೂ ಅಂತಾರಾಷ್ಟ್ರೀಯ ಯೋಗಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಯೋಗಾಸನ ಮತ್ತು ಪ್ರಾಣಾಯಾಮದ ವಿವಿಧ ಅಭ್ಯಾಸಗಳನ್ನು ಪರಿಚಯಿಸಲಾಗುವುದು ಎಂದು ಮಾಹಿತಿ ನೀಡಿದರು.

ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಸದೃಢತೆ, ಮಾನಸಿಕ ನೆಮ್ಮದಿ ಹಾಗೂ ಏಕಾಗ್ರತೆ ವೃದ್ಧಿಗೆ ಸಹಾಯವಾಗುತ್ತದೆ. ಒತ್ತಡದ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯೋಗವನ್ನು ದಿನನಿತ್ಯದ ಚಟುವಟಿಕೆಯ ಭಾಗವಾಗಿಸಿಕೊಳ್ಳುವುದು ಅಗತ್ಯವಾಗಿದೆ. ಸಾರ್ವಜನಿಕರು, ಯುವಜನರು ಹಾಗೂ ಯೋಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಿದ್ದಪ್ಪಗೌಡ ಅಲ್ದಾಳ್, ಕಿಶೋರ್ ಕುಮಾರ್ ಟಿಪ್ಪರ್ಕರ್, ತಿರುಮಲ ಯಾದವ್, ಶಶಿಕಲಾ ಸಂಗನಗೌಡ, ರಾಮಣ್ಣ, ಬಸವರಾಜ ಚಲ್ಮಲ್, ಕನಕರಾಜ, ಅಯ್ಯಪ್ಪ ಚಲ್ಮಲ್, ವೆಂಕಟೇಶ್ವರ ರಾವ್, ವಿಜಯಕುಮಾರ್ ಮುತಾಲಿಕ ದೇಸಾಯಿ, ಬ್ರಹ್ಮಯ್ಯ ಆಚಾರ್, ಕರವೇ ಬಸನಗೌಡ, ಜಗದೀಶ ಓತೂರ್ ಸೇರಿದಂತೆ ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.