ಮಾನ್ವಿ: ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನವೆಂಬರ್ 8ರಂದು ಸಿಂಧನೂರಿನಿಂದ ತಿಡಿಗೋಳ ಗ್ರಾಮದವರೆಗೆ ಬೈಕ್ ರ್ಯಾಲಿ ಹಾಗೂ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರವಣಕುಮಾರ ಮುದ್ದಂಗುಡ್ಡಿ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಿಂಧನೂರು ಘಟಕ ಹಮ್ಮಿಕೊಂಡಿರುವ ಹೋರಾಟಕ್ಕೆ ಮಾನ್ವಿ ತಾಲೂಕಿನ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿವೆ ಎಂದರು.
ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದರೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಸಂಬಂಧಪಟ್ಟ ಸಚಿವರು ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ತಿಡಿಗೋಳ ಗ್ರಾಮದ ದಲಿತರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ಸಾಮಾಜಿಕ ಬಹಿಷ್ಕಾರಕ್ಕೆ ಪ್ರಚೋದಿಸುವವರ ವಿರುದ್ಧ ಕ್ರಮ ಜರುಗಿಸಬೇಕು. ಪ್ರಮುಖ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಕರ್ತವ್ಯಲೋಪದ ಆರೋಪ ಎದುರಿಸುತ್ತಿರುವ ತುರ್ವಿಹಾಳ ಠಾಣಾಧಿಕಾರಿ ಯರಿಯಪ್ಪ ಅಂಗಡಿ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮದಲ್ಲಿ ಅಸ್ಪೃಶ್ಯತೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು. ಬಪೂರು–ತಿಡಿಗೋಳ ರಸ್ತೆ ತಿರುವಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಬೇಕು. ದಲಿತ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ, ಭೂ ಒಡೆತನ ಯೋಜನೆಯಡಿ ತಲಾ ಎರಡು ಎಕರೆ ಜಮೀನು, ರಸ್ತೆ, ಚರಂಡಿ, ಪ್ರತ್ಯೇಕ ಕುಡಿಯುವ ನೀರಿನ ಪೈಪ್ಲೈನ್ ಹಾಗೂ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ, ಸಹಕಾರಿ ಸಂಘ ಹಾಗೂ ಶಾಲಾ ಬಿಸಿಯೂಟ ತಯಾರಿಕೆ ಸೇರಿದಂತೆ ಉದ್ಯೋಗಗಳಲ್ಲಿ ದಲಿತರಿಗೆ ಅವಕಾಶ ಕಲ್ಪಿಸಬೇಕು. ಹದ್ದಿನಾಳದ ಭೂಮಾನಂದ, ಹೊಕ್ರಾಣಿಯ ಅಶ್ವಿನಿ ಹಾಗೂ ಕರಡಕಲ್ನ ರಾಣೆಮ್ಮ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಬೇಕು. ತಿಡಿಗೋಳದಲ್ಲಿ ಪೊಲೀಸ್ ಉಪಠಾಣೆ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ತಿಪ್ಪಣ್ಣ ಬಾಗಲವಾಡ, ಶೇಖ್ ಫರೀದ್ ಉಮ್ರಿ ಮಾತನಾಡಿದರು. ಅಬ್ರಾಹಂ ಪನ್ನೂರು, ಅನಿಲ್ ನೀಲಕಂಠ, ಹನುಮಂತಕೋಟೆ, ರವೀಂದ್ರ ಜಾನೇಕಲ್, ನಾಸಿರ್ ಅಲಿ, ಬಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.



