ಮಾನ್ವಿ: ಸರ್ಕಾರಿ ಸೇವೆಯಿಂದ ನಿವೃತ್ತಿಯಾಗುವುದು ವೃತ್ತಿ ಜೀವನದ ಸಹಜ ಪ್ರಕ್ರಿಯೆಯಾಗಿದ್ದು, ನಿವೃತ್ತಿಯ ನಂತರವೂ ಉತ್ತಮ ಹವ್ಯಾಸಗಳು ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ವಿರೂಪಾಕ್ಷೇಶ್ವರ ಸೌಹಾರ್ದ ಸಹಕಾರಿ ನಿಯಮಿತದ ಸಭಾಂಗಣದಲ್ಲಿ ಆಯೋಜಿಸಿದ್ದ ವಯೋನಿವೃತ್ತ ಸಂಪನ್ಮೂಲ ಶಿಕ್ಷಕ ಚನ್ನಬಸವರಾಜ ಹಿರೇಮಠ ಅವರ ಅಭಿನಂದನಾ ಸಮಾರಂಭದಲ್ಲಿ ದಂಪತಿಯನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.
ಶಿಕ್ಷಕ ವೃತ್ತಿಯು ಸಮಾಜದಲ್ಲಿ ಅತ್ಯಂತ ಗೌರವಯುತ ಸ್ಥಾನ ಹೊಂದಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಸೇವೆ ಮಹತ್ವದ್ದಾಗಿದೆ. ಸೇವಾವಧಿಯಲ್ಲಿ ಗಳಿಸಿದ ಜ್ಞಾನ ಮತ್ತು ಅನುಭವವನ್ನು ನಿವೃತ್ತಿಯ ನಂತರವೂ ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಉತ್ತಮ ಪ್ರವೃತ್ತಿಗಳನ್ನು ಬೆಳೆಸಿಕೊಂಡು ಅರ್ಥಪೂರ್ಣ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ರಮೇಶಬಾಬು ಯಾಳಗಿ ಮಾತನಾಡಿ, ಚನ್ನಬಸವರಾಜ ಹಿರೇಮಠ ಅವರು ಪುಸ್ತಕಪ್ರೇಮಿಯಾಗಿದ್ದು, ಓದು ಮತ್ತು ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ನಿವೃತ್ತಿಯ ನಂತರವೂ ಸಾಹಿತ್ಯ ಅಧ್ಯಯನ ಹಾಗೂ ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಂಡು ಸಂತೃಪ್ತ ಜೀವನ ನಡೆಸಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ನಿವೃತ್ತ ಸಂಪನ್ಮೂಲ ಶಿಕ್ಷಕ ಚನ್ನಬಸವರಾಜ ಹಿರೇಮಠ ದಂಪತಿಯನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಂಕರಾನಂದ ಹಿರೇಮಠ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಗುರು ಸುಧಾಕರ ಸಂಜೀವ, ಉಮಾಶಂಕರ, ಪಂಪಯ್ಯ ಸ್ವಾಮಿ ಸಾಲಿಮಠ, ವಕೀಲ ವೀರನಗೌಡ ಪೋತ್ನಾಳ, ರಾಜಶೇಖರಪ್ಪ ಹರವಿ, ಶಶಾಂಕ ಹಿರೇಮಠ, ವೀರಭದ್ರಯ್ಯ ಸ್ವಾಮಿ, ಡಾ. ಬಸವರಾಜ ಸುಂಕೇಶ್ವರ, ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.



