ಮಾನ್ವಿ: ತಾಲೂಕಿನ ಕರೇಗುಡ್ಡ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಅ.11ರಿಂದ ಶ್ರೀದೇವಿ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಅ.11ರಂದು ಬೆಳಿಗ್ಗೆ 9ಕ್ಕೆ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅ.11ರಿಂದ 23ರವರೆಗೆ ಪ್ರತಿದಿನ ಸಂಜೆ 7.30ರಿಂದ ರಾತ್ರಿ 9.30ರವರೆಗೆ ನಂದವಾಡಿಗಿಯ ಮಹಾಂತೇಶ ಶಾಸ್ತ್ರಿಗಳು ಸರಗಣಚಾರಿ ಅವರಿಂದ ಶ್ರೀದೇವಿ ಪುರಾಣ ಪ್ರವಚನ ನಡೆಯಲಿದೆ.

ಅ.14ರಂದು ಶ್ರೀಮಠದ ಲಿಂ. ಮಹಾಂತಪ್ಪ ತಾತನವರ ಪುಣ್ಯಾರಾಧನೆ ನಡೆಯಲಿದೆ. ಅ.23ರಂದು ಶ್ರೀದೇವಿ ಪುರಾಣದ ಸಮಾರೋಪದ ಅಂಗವಾಗಿ ಮಹಾಮಂಗಳ ಕಾರ್ಯಕ್ರಮ ಹಾಗೂ ಸಂಜೆ 5ಕ್ಕೆ ಶ್ರೀಮಠದ ಆವರಣದಲ್ಲಿ ಸುಮಂಗಲಿಯರಿಂದ ಶ್ರೀದೇವಿಯ ಮಹಾರಥೋತ್ಸವ ಜರುಗಲಿದೆ.

ನ.27ರಂದು ಸಂಜೆ 5ಕ್ಕೆ ಲಿಂ. ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ರಥೋತ್ಸವ ನಡೆಯಲಿದ್ದು, ಒಳಬಳ್ಳಾರಿ ಸುವರ್ಣಗಿರಿ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು, ಕೊಟ್ಟೂರು ಸಂಸ್ಥಾನ ಮಠದ ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರು, ಜನಪ್ರತಿನಿಧಿಗಳು, ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.