ಲಿಂಗಸುಗೂರು: ಪಟ್ಟಣದ ಎಸ್‌ಬಿಎಚ್ ಕಾಲೋನಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅ.11ರಿಂದ 20ರವರೆಗೆ ರಜತ ಮಹೋತ್ಸವ ಹಾಗೂ ನವರಾತ್ರೋತ್ಸವವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ರಜತ ಮಹೋತ್ಸವದ ಅಂಗವಾಗಿ ಅ.12 ಮತ್ತು 13ರಂದು ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು ಆಗಮಿಸಲಿದ್ದು, ಬೆಳಿಗ್ಗೆ ಪಾದಪೂಜೆ, ಸಂಸ್ಥಾನ ಪೂಜೆ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ.

ಅ.14ರಂದು ಬೆಂಗಳೂರಿನ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ಆಗಮಿಸಿ ಪಾದಪೂಜೆ, ಸಂಸ್ಥಾನ ಪೂಜೆ ಹಾಗೂ ಆಶೀರ್ವಚನ ನೀಡಲಿದ್ದಾರೆ. ಅ.15 ಮತ್ತು 16ರಂದು ಹುಣಸಿಹೊಳೆ ಕಣ್ವಮಠದ ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ಪಾದಪೂಜೆ, ಸಂಸ್ಥಾನ ಪೂಜೆ, ಉಪನ್ಯಾಸ ಹಾಗೂ ಆಶೀರ್ವಚನ ಕಾರ್ಯಕ್ರಮಗಳು ನಡೆಯಲಿವೆ.

ಆಶ್ವೀಜ ಶುಕ್ಲಪಕ್ಷದ ಪ್ರತಿಪದದಿಂದ ಮಹಾನವಮಿವರೆಗೆ ನಡೆಯುವ ನವರಾತ್ರಿ ಮಹೋತ್ಸವದಲ್ಲಿ ಶ್ರೀನಿವಾಸ ದೇವರ ಪೂಜೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಒಂಬತ್ತು ದಿನಗಳ ಕಾಲ ದೀಪ ಸಮರ್ಪಣೆ ಹಾಗೂ ವಿಶೇಷ ಅನ್ನಸಂತರ್ಪಣೆ ನಡೆಯಲಿದೆ.

ಶ್ರೀದೇವಿ–ಭೂದೇವಿ ಸಮೇತ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ನವರಾತ್ರಿ ಮಹೋತ್ಸವವು ಅ.11ರಿಂದ ವಿಜಯದಶಮಿಯಾದ ಅ.20ರವರೆಗೆ ನಡೆಯಲಿದೆ.

ಶ್ರೀ ಶ್ರೀನಿವಾಸ ದೇವರ ಮಹಾತ್ಮೆ ಪುರಾಣ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಕುರಿತು ಪಂ. ಗೋವಿಂದಾಚಾರ್ಯ ಸಿಂಧನೂರು ಅವರು ಪ್ರತಿದಿನ ಮಧ್ಯಾಹ್ನ 12ರಿಂದ 1ರವರೆಗೆ ಪ್ರವಚನ ನೀಡಲಿದ್ದಾರೆ. ಅ.20ರಂದು ಬೆಳಿಗ್ಗೆ 10ಕ್ಕೆ ಪುರಾಣ ಮಂಗಳ ಕಾರ್ಯಕ್ರಮ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ 11ರಿಂದ 12ರವರೆಗೆ ಶ್ರೀ ಲಕ್ಷ್ಮೀ ವೆಂಕಟೇಶ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಲಿದೆ.

ಸಕಲ ಸದ್ಭಕ್ತರು ನವರಾತ್ರೋತ್ಸವದ ವಿವಿಧ ಧಾರ್ಮಿಕ ಸೇವೆಗಳಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪುನೀತರಾಗುವಂತೆ ದೇವಸ್ಥಾನದ ಧರ್ಮದರ್ಶಿ ಪ್ರಾಣೇಶ ಆಚಾರ ವಂದಲಿ ಹಾಗೂ ವಿಶ್ವಸ್ಥ ಸಮಿತಿ ಅಧ್ಯಕ್ಷ ಮೋಹನ ಜೋಶಿ ಮನವಿ ಮಾಡಿದ್ದಾರೆ.