ಮಾನ್ವಿ: ಆದಾಯ ಮಿತಿಗೆ ಸಂಬಂಧಿಸಿದ ಕಾರಣಗಳಿಂದ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿರುವ ವೃದ್ಧಾಪ್ಯ ವೇತನವನ್ನು ಅರ್ಹ ಫಲಾನುಭವಿಗಳಿಗೆ ಪುನರಾರಂಭಿಸುವ ನಿಟ್ಟಿನಲ್ಲಿ ಪರಿಶೀಲನಾ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಮಾನ್ವಿ ತಾಲೂಕಿನಲ್ಲಿ ಇದುವರೆಗೆ 11,513 ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದೆ ಎಂದು ತಹಶೀಲ್ದಾರ್ ಭೀಮರಾಯ ರಾಮಸಮುದ್ರ ತಿಳಿಸಿದರು.

ವೃದ್ಧಾಪ್ಯ ವೇತನ ಪಡೆಯುವ ಫಲಾನುಭವಿಗಳ ವಾರ್ಷಿಕ ಆದಾಯ ₹30 ಸಾವಿರಕ್ಕಿಂತ ಹೆಚ್ಚಿರುವ ಕಾರಣದಿಂದ ಹಲವರ ಪಿಂಚಣಿ ಪಾವತಿ ಸ್ಥಗಿತಗೊಂಡಿತ್ತು. ಇದೀಗ ಆದಾಯ ಅರ್ಹತಾ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಗೆ ಒಳಪಡುವ ಅರ್ಹ ಫಲಾನುಭವಿಗಳಿಗೂ ವೃದ್ಧಾಪ್ಯ ವೇತನ ದೊರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ಮಾನ್ವಿ ತಾಲೂಕಿನಲ್ಲಿ ಒಟ್ಟು 13,333 ಫಲಾನುಭವಿಗಳ ಪರಿಶೀಲನೆ ಕೈಗೊಳ್ಳಬೇಕಿದ್ದು, ಈ ಪೈಕಿ 11,513 ಫಲಾನುಭವಿಗಳ ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ. ಉಳಿದ 1,820 ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಬಾಕಿ ಇದ್ದು, ಅದನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಪರಿಶೀಲನೆ ಪೂರ್ಣಗೊಂಡಿರುವ ಫಲಾನುಭವಿಗಳ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಯ ಅನುಮೋದನೆಗಾಗಿ ಸಿದ್ಧಪಡಿಸಲಾಗಿದೆ. ಪರಿಶೀಲನಾ ವರದಿಗೆ ಅನುಮೋದನೆ ದೊರೆತ ತಕ್ಷಣ ಅರ್ಹ ಫಲಾನುಭವಿಗಳ ವೃದ್ಧಾಪ್ಯ ವೇತನದ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು.

ಕಳೆದ ನಾಲ್ಕು ತಿಂಗಳಿಂದ ಪಿಂಚಣಿ ಸ್ಥಗಿತಗೊಂಡಿರುವುದರಿಂದ ವೃದ್ಧರು ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ. ವಿಶೇಷವಾಗಿ ದಿನನಿತ್ಯದ ಜೀವನ ನಿರ್ವಹಣೆ, ಔಷಧೋಪಚಾರ ಹಾಗೂ ಇತರ ಅಗತ್ಯ ಖರ್ಚುಗಳಿಗೆ ಪಿಂಚಣಿ ಹಣವನ್ನೇ ಅವಲಂಬಿಸಿರುವ ಹಿರಿಯ ನಾಗರಿಕರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ಮತ್ತು ಅನುಮೋದನೆ ಪ್ರಕ್ರಿಯೆ ಪೂರ್ಣಗೊಂಡು ಅರ್ಹ ಫಲಾನುಭವಿಗಳಿಗೆ ಶೀಘ್ರವೇ ವೇತನ ಪಾವತಿಯಾಗುವ ನಿರೀಕ್ಷೆಯಿದೆ.