ಜಾಲಹಳ್ಳಿ, ಅ.26: ದೇವದುರ್ಗ ತಾಲೂಕಿನ ಹೊಸೂರು ಸಿದ್ದಾಪುರ ಗ್ರಾಮದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಗ್ರಾಮಸ್ಥರು ಹಾಗೂ ಸಮಾಜದ ಮುಖಂಡರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಕಾರ್ಯಕ್ರಮದಲ್ಲಿ ಪಿಡ್ಡಪ್ಪ ಶರಣ ಹಾಗೂ ಅಂಬರೇಶ ತಾತ ಅವರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡ ಚಂದಪ್ಪ ಬುದ್ದಿನ್ನಿ, ಅಯೋಧ್ಯೆಯಲ್ಲಿ ಶ್ರೀರಾಮನಿಗೆ ದೊರೆಯುವ ಗೌರವದಂತೆ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರಿಗೂ ಗೌರವ ದೊರೆಯಬೇಕು. ವಾಲ್ಮೀಕಿ ಅವರು ಇಡೀ ವಿಶ್ವಕ್ಕೆ ಮಾನವೀಯತೆ, ಸತ್ಯ, ಧರ್ಮ ಮತ್ತು ನ್ಯಾಯದ ಸಂದೇಶ ಸಾರಿದ ಮಹಾನ್ ಋಷಿಯಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ವೃತ್ತ ನಿರ್ಮಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು, ವಾಲ್ಮೀಕಿ ವೃತ್ತ ನಿರ್ಮಾಣ ಕಾರ್ಯಕ್ಕೆ ವೈಯಕ್ತಿಕವಾಗಿ ₹11 ಸಾವಿರ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುದುರಂಗಪ್ಪ ಜಲ್ಲಿ, ಮೌನೇಶ್ ಜಲ್ಲಿ ಹಾಗೂ ತಿಮ್ಮಣ್ಣ ಬುಂಕಲದೊಡ್ಡಿ ಅವರು, ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಸಾಧನೆಗಳು ಸಮಾಜಕ್ಕೆ ಸದಾ ಸ್ಫೂರ್ತಿಯಾಗಿವೆ. ಅವರ ಚಿಂತನೆಗಳು ಹಾಗೂ ರಾಮಾಯಣದ ಮೂಲಕ ನೀಡಿದ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಗ್ರಾಮದಲ್ಲಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವಂತಹ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ತಿಮ್ಮಣ್ಣ ಜಲ್ಲಿ, ಚಂದಪ್ಪ ಬುದ್ದಿನ್ನಿ, ಸಂಜೀವಣ್ಣ ದಳಪತಿ, ಮಾನಪ್ಪ ಕಾವಲಿ, ಬಸವರಾಜ ಮಂಡಲಗುಡ್ಡ, ಲಚಮಯ್ಯ ಜಲ್ಲಿ, ಅಯ್ಯಪ್ಪ ಜಲ್ಲಿ, ದುರುಗಯ್ಯ ಯಲಗಟ್ಟಿ, ಶಿವಪ್ಪ ಬೆಲ್ಲದ, ರಂಗಪ್ಪ ಕಾವಲಿ, ತಿಮ್ಮಣ್ಣ ಮುರಾಳ, ದೇವೇಂದ್ರ ದೇವಿಗುಡಿ, ಬಸಯ್ಯ ಜಲ್ಲಿ, ದುರುರಂಗಪ್ಪ ಜಲ್ಲಿ, ಬಸವರಾಜ ದೊಡ್ಡಮನಿ, ಶಿವರಾಜ ಮುರಾಳ, ಮಹೇಂದ್ರ ಕುಮಾರ್, ತಿಮ್ಮಣ್ಣ ಬುಂಕಲದೊಡ್ಡಿ, ಸಿದ್ದಣ್ಣ ಕಾವಲಿ, ರಂಗಪ್ಪ ಜೋಳದಡಗಿ, ಗೋಪಾಲ ಕಾವಲಿ, ಜಯಪ್ಪ ಬೆಲ್ಲದ, ಮೌನೇಶ್ ಜಲ್ಲಿ, ಸಿದ್ದಪ್ಪ ದೊಡ್ಡಮನಿ, ಸಿದ್ದಪ್ಪ ಜಲ್ಲಿ, ಕೃಷ್ಣ ಯಾದವ್, ಮುದುಕಪ್ಪ ಕಾವಲಿ, ವೆಂಕಟೇಶ್ ಕಸನದೊಡ್ಡಿ, ಭೀಮಣ್ಣ, ವೆಂಕಟೇಶ್ ಮುಂಡರಗಿ, ತಿಮ್ಮಣ್ಣ ನಾಯಕ, ಸಿದ್ದರಾಮ, ತಿರುಪತಿ ದೊಡ್ಡಮನಿ, ಮಲ್ಲಣ್ಣ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



