ಸಿಂಧನೂರು, ಅ.28: ಕಳೆದ 12 ವರ್ಷಗಳಿಂದ ಸ್ಥಗಿತಗೊಂಡಿದ್ದ ಉದರದರ್ಶಕ ಸಂತಾನಹರಣ ಶಸ್ತ್ರಚಿಕಿತ್ಸಾ ಸೇವೆಯನ್ನು ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪುನರಾರಂಭಿಸಲಾಗಿದ್ದು, ಮೊದಲ ದಿನವೇ ಎಂಟು ಮಹಿಳೆಯರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ಥಳೀಯವಾಗಿಯೇ ಕುಟುಂಬ ಕಲ್ಯಾಣ ಸೇವೆ ಲಭ್ಯವಾಗುವಂತಾಗಿದೆ.

ಈ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದ ತುರ್ವಿಹಾಳ ಆಸ್ಪತ್ರೆಯಲ್ಲಿ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಉದರದರ್ಶಕ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶವಿಲ್ಲದ ಕಾರಣ ಸುಮಾರು 12 ವರ್ಷಗಳಿಂದ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 28ರಂದು ಶಸ್ತ್ರಚಿಕಿತ್ಸಾ ಸೇವೆಗೆ ಮರುಚಾಲನೆ ನೀಡಲಾಗಿದೆ.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಹಾಗೂ ಪ್ರಸೂತಿ ತಜ್ಞ ಡಾ. ನಾಗರಾಜ ಕಟ್ಟಾ ಅವರ ನೇತೃತ್ವದಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ತಂಡವು ಎಂಟು ಫಲಾನುಭವಿಗಳಿಗೆ ಉದರದರ್ಶಕ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.

ಶಸ್ತ್ರಚಿಕಿತ್ಸಾ ತಂಡದಲ್ಲಿ ಅರವಳಿಕೆ ತಜ್ಞೆ ಡಾ. ಕೋನಿಕಾ ಕಟ್ಟಾ, ಮಕ್ಕಳ ತಜ್ಞೆ ಡಾ. ದೀಪಿಕಾ, ವೈದ್ಯಾಧಿಕಾರಿಗಳಾದ ಡಾ. ಶ್ರೀರಾಮ ನಲ್ಲ, ವಿರೂಪಾಕ್ಷಪ್ಪ ಟಿ., ಶುಶ್ರೂಷಾಧಿಕಾರಿಗಳಾದ ಹಸೀನಾ, ರೇಣುಕಾ, ವೆಂಕಟೇಶ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜಯಲಕ್ಷ್ಮೀ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಶ್ರೀ ಹಾಗೂ ಡಿ ದರ್ಜೆ ಸಿಬ್ಬಂದಿಗಳಾದ ಪೂಜಾ, ಬಸವರಾಜ, ಹನುಮೇಶ, ರಮೇಶ, ಹನುಮವ್ವ ಮತ್ತು ಶ್ರೀದೇವಿ ಭಾಗವಹಿಸಿದ್ದರು.

ಉದರದರ್ಶಕ ಸಂತಾನಹರಣ ಶಸ್ತ್ರಚಿಕಿತ್ಸೆಯು ಮಹಿಳೆಯರಿಗಾಗಿ ಇರುವ ಶಾಶ್ವತ ಕುಟುಂಬ ಯೋಜನಾ ವಿಧಾನಗಳಲ್ಲಿ ಒಂದಾಗಿದೆ. ದಂಪತಿಗಳು ತಮ್ಮ ಕುಟುಂಬವನ್ನು ಪೂರ್ಣಗೊಳಿಸಿಕೊಂಡು ಮುಂದೆ ಮಕ್ಕಳನ್ನು ಹೊಂದಬಾರದೆಂದು ನಿರ್ಧರಿಸಿದ ಸಂದರ್ಭದಲ್ಲಿ ಈ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಅರ್ಹ ಮಹಿಳೆಯರಿಗೆ ಅಗತ್ಯ ವೈದ್ಯಕೀಯ ತಪಾಸಣೆ, ಸಮಾಲೋಚನೆ ಹಾಗೂ ಸ್ವಯಂಪ್ರೇರಿತ ತಿಳುವಳಿಕೆಯುಳ್ಳ ಒಪ್ಪಿಗೆ ಪಡೆದ ನಂತರವೇ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯರ ಕೊರತೆಯಿಂದಾಗಿ ಕುಟುಂಬ ಯೋಜನೆಯ ಶಸ್ತ್ರಚಿಕಿತ್ಸೆಗಾಗಿ ಮಹಿಳೆಯರು ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಇದರಿಂದ ಪ್ರಯಾಣದ ವೆಚ್ಚ, ಸಮಯದ ನಷ್ಟ ಹಾಗೂ ಕುಟುಂಬದ ಸದಸ್ಯರಿಗೆ ಹೆಚ್ಚುವರಿ ತೊಂದರೆ ಉಂಟಾಗುತ್ತಿತ್ತು. ಇದೀಗ ತುರ್ವಿಹಾಳದಲ್ಲಿಯೇ ಈ ಸೇವೆ ಆರಂಭವಾಗಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರಿಗೆ ಅನುಕೂಲವಾಗಲಿದೆ.

ಸುಮಾರು 12 ವರ್ಷಗಳ ನಂತರ ಉದರದರ್ಶಕ ಶಸ್ತ್ರಚಿಕಿತ್ಸೆ ಪುನರಾರಂಭಿಸಿರುವುದು ಗ್ರಾಮೀಣ ಆರೋಗ್ಯ ಸೇವೆಯ ಬಲವರ್ಧನೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಹಾಗೂ ತಜ್ಞರ ಲಭ್ಯತೆಗೆ ಅನುಗುಣವಾಗಿ ಈ ಸೇವೆಯನ್ನು ನಿಯಮಿತವಾಗಿ ಮುಂದುವರಿಸುವ ಉದ್ದೇಶ ಹೊಂದಲಾಗಿದೆ ಎಂದು ಆರೋಗ್ಯ ಕೇಂದ್ರದ ವೈದ್ಯಕೀಯ ತಂಡ ತಿಳಿಸಿದೆ.

ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸಾ ಸೇವೆಯನ್ನು ಯಶಸ್ವಿಯಾಗಿ ಪುನರಾರಂಭಿಸಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಕಾರ್ಯವನ್ನು ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಬಸನಗೌಡ ತುರ್ವಿಹಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್., ಕಾರ್ಯಕ್ರಮಾಧಿಕಾರಿ ಡಾ. ಶಿವಕುಮಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಅಯ್ಯನಗೌಡ ಮೆಚ್ಚಿ ಅಭಿನಂದಿಸಿದ್ದಾರೆ.

ಸ್ಥಳೀಯ ಮಟ್ಟದಲ್ಲಿಯೇ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವ ಇಂತಹ ಪ್ರಯತ್ನಗಳು ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿವೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.