ಜಾಲಹಳ್ಳಿ, ಅ.11: ಗಾಣದಾಳ ಹಾಗೂ ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಿ, ಜಾಲಹಳ್ಳಿ ಹೋಬಳಿಯಲ್ಲಿಯೇ ಮುಂದುವರಿಸಬೇಕೆಂದು ಒತ್ತಾಯಿಸಿ ಅಕ್ಟೋಬರ್ 12ರಂದು ಜಾಲಹಳ್ಳಿ ನಾಡಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಪಟ್ಟಣದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಗಳ ಮುಖಂಡರು, ಸೋಮವಾರ ಶ್ರೀ ರಂಗನಾಥ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ನಾಡಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಗ್ರಾಮಸ್ಥರ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.

ವಕೀಲ ಬಸವರಾಜ್ ಗಾಣದಾಳ ಮಾತನಾಡಿ, ಗಾಣದಾಳ ಹಾಗೂ ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸುವುದು ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದೆ. ಪ್ರಸ್ತುತ ಪಹಣಿ, ಮ್ಯುಟೇಷನ್ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗಾಗಿ ರೈತರು ಹಾಗೂ ಸಾರ್ವಜನಿಕರು ಸಮೀಪದ ಜಾಲಹಳ್ಳಿಯನ್ನು ಬಿಟ್ಟು ದೂರದ ಅರಕೇರಾಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮಯ ಮತ್ತು ಹಣ ವ್ಯರ್ಥವಾಗುವುದರ ಜೊತೆಗೆ ರೈತರು, ವೃದ್ಧರು ಹಾಗೂ ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದರು.

ಮುಖಂಡ ಸಾಬಣ್ಣ ಕಮ್ಮಾಲದಿನ್ನಿ ಮಾತನಾಡಿ, ಗ್ರಾಮಗಳ ಆಡಳಿತಾತ್ಮಕ ಅನುಕೂಲತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಗಾಣದಾಳ ಮತ್ತು ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಜಾಲಹಳ್ಳಿ ಹೋಬಳಿಯಲ್ಲಿಯೇ ಉಳಿಸಿ ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಬೇಕು. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಮರೇಗೌಡ ಕಮ್ಮಾಲದಿನ್ನಿ, ಶಿವನಗೌಡ ದೇಸಾಯಿ, ಶರಣಗೌಡ ಕಮ್ಮಾಲದಿನ್ನಿ, ವೆಂಕಟರೆಡ್ಡಿ ಕಕ್ಕಲದೊಡ್ಡಿ, ಸಾಬಣ್ಣ ಹೂಗಾರ್, ಅಯ್ಯನ್ ಗೌಡ ಮಾಸ್ತಿ, ಶಿವು ಪಾಟೀಲ್, ವಕೀಲ ವಸಂತ್ ಕುಮಾರ್, ನಾಗರಾಜ್, ಅಬ್ರಹಾಂ ಕಮ್ಮಾಲದಿನ್ನಿ, ಹನುಮಂತ್ ಸೋಮನಮರಡಿ, ಎಂ.ಆರ್. ಬಸವ ಸೇರಿದಂತೆ ಗಾಣದಾಳ ಹಾಗೂ ಸೋಮನಮರಡಿ ಗ್ರಾಮಗಳ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.