ಲಿಂಗಸುಗೂರು: ನಾರಾಯಣಪುರ ಬಲದಂಡೆ ಹಾಗೂ ರಾಂಪುರ ಏತ ನೀರಾವರಿ ಕಾಲುವೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳನ್ನು ಉಳಿಸಲು ಜನವರಿ 15ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ದುರ್ಗಾಪ್ರಸಾದ ರೆಡ್ಡಿ ನೇತೃತ್ವದಲ್ಲಿ ರೈತರು ನೀರಾವರಿ ಸಚಿವರಿಗೆ ಬರೆದ ಮನವಿಯನ್ನು ಸಹಾಯಕ ಆಯುಕ್ತ ನಾಗೇಂದ್ರ ಬಾಬು ಅವರಿಗೆ ಸಲ್ಲಿಸಿದರು.

ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದಿರುವ ಹತ್ತಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಸಮರ್ಪಕವಾಗಿ ಕೈಗೆ ಬರಬೇಕಾದರೆ ಜನವರಿ 15ರವರೆಗೆ ನೀರಿನ ಅವಶ್ಯಕತೆಯಿದೆ. ಆದರೆ ಅಕ್ಟೋಬರ್ 15ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನವೆಂಬರ್ 12ರವರೆಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ನವೆಂಬರ್ 12ಕ್ಕೆ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಿದರೆ ಈಗಾಗಲೇ ಬೆಳೆದಿರುವ ಬೆಳೆಗಳು ಕಾಳುಕಟ್ಟುವ ಹಾಗೂ ಫಸಲು ಬರುವ ಹಂತ ತಲುಪುವ ಮುನ್ನವೇ ಒಣಗಿಹೋಗುವ ಸಾಧ್ಯತೆಯಿದೆ. ಇದರಿಂದ ರೈತರು ನಿರೀಕ್ಷಿತ ಇಳುವರಿ ಪಡೆಯಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈಗಾಗಲೇ ಸಾಲ ಮಾಡಿ ಬಿತ್ತನೆ, ಗೊಬ್ಬರ, ಔಷಧ ಹಾಗೂ ಕೃಷಿ ಕೂಲಿ ವೆಚ್ಚ ಭರಿಸಿರುವ ರೈತರಿಗೆ ನೀರಿನ ಕೊರತೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಲಾಶಯದಲ್ಲಿನ ನೀರಿನ ಲಭ್ಯತೆಯನ್ನು ಪರಿಗಣಿಸಿ ಡಿಸೆಂಬರ್ 1ರವರೆಗೆ ವಾರಾಬಂದಿ ಪದ್ಧತಿಯಂತೆ ಕಾಲುವೆಗಳಿಗೆ ನೀರು ಹರಿಸಬೇಕು. ನಂತರ ಜನವರಿ 15ರವರೆಗೆ ನೀರಿನ ಹರಿವಿನ ಪ್ರಮಾಣವನ್ನು ಸೂಕ್ತವಾಗಿ ಪರಿವರ್ತಿಸಿ ಬೆಳೆಗಳಿಗೆ ಅಗತ್ಯವಿರುವ ನೀರು ಒದಗಿಸಬೇಕು. ಈ ಕ್ರಮದಿಂದ ಹತ್ತಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ರೈತರು ಮನವಿ ಮಾಡಿದರು.

ನೀರಾವರಿ ಪ್ರದೇಶದ ರೈತರು ತಮ್ಮ ಜೀವನೋಪಾಯಕ್ಕಾಗಿ ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಬೆಳೆಗಳು ಕೈಗೆ ಬರುವ ಹಂತದಲ್ಲಿ ನೀರು ಸ್ಥಗಿತಗೊಂಡರೆ ತಿಂಗಳುಗಟ್ಟಲೆ ಪಟ್ಟ ಶ್ರಮ ವ್ಯರ್ಥವಾಗಲಿದೆ. ಬೆಳೆ ನಷ್ಟದಿಂದ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ರೈತ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಗಾರರಾಗಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಸಿದರು.

ರೈತರ ಹಿತದೃಷ್ಟಿಯಿಂದ ಸರ್ಕಾರ ನೀರಾವರಿ ಸಲಹಾ ಸಮಿತಿಯ ನಿರ್ಧಾರವನ್ನು ಮರುಪರಿಶೀಲಿಸಿ, ಬೆಳೆಗಳ ಸ್ಥಿತಿಗತಿ ಹಾಗೂ ನೀರಿನ ಲಭ್ಯತೆಯ ಆಧಾರದ ಮೇಲೆ ಕಾಲುವೆಗಳಿಗೆ ನೀರು ಹರಿಸುವ ಅವಧಿಯನ್ನು ವಿಸ್ತರಿಸಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ತಿಳಿಸಿದರು.

ನವೆಂಬರ್ 5ರೊಳಗೆ ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸದಿದ್ದರೆ ಗುರುಗುಂಟಾದಿಂದ ಲಿಂಗಸುಗೂರಿನ ಬಸವಸಾಗರ ಕ್ರಾಸ್‌ವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತರಾದ ಮಹ್ಮದ್ ಸಾಬ್, ಹನುಮಂತ ಹಳ್ಳಿ, ಹುಲಗಪ್ಪ ಡೊಳ್ಳ, ರಂಗಪ್ಪ, ಅಮರೇಶ ಭೂಪೂರ, ನಿತೀಶ್ ಕುಮಾರ್, ಶೀಲವಮತ, ವೆಂಕಟೇಶ, ಕನಕಪ್ಪ ಬಡಿಗೇರ, ಕರಿಯಪ್ಪ, ಹಿಮಾಮಸಾಬ್, ನಾಗರಾಜ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.