ರಾಯಚೂರು: ನಾರಾಯಣಪುರ ಜಲಾಶಯದಿಂದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಿ ಬೆಳೆಗಳನ್ನು ರಕ್ಷಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ನವೆಂಬರ್ 15ರಿಂದ 20ರವರೆಗೆ ಗಬ್ಬೂರಿನಿಂದ ನಾರಾಯಣಪುರ ಜಲಾಶಯದವರೆಗೆ ಆರು ದಿನಗಳ ಬೃಹತ್ ರೈತ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೃಷಿ ಅಭಿವೃದ್ಧಿ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ. ಮಸ್ತಾನ ನಾಯಕ್ ಪೂಜಾರಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೀರು ಕೊಡಿ, ಇಲ್ಲ ವಿಷ ಕೊಡಿ’ ಎಂಬ ಘೋಷವಾಕ್ಯದಡಿ ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಲಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರನ್ನು ಒದಗಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದು, ಇದರಿಂದ ರೈತರು ಬೆಳೆ ನಷ್ಟದ ಆತಂಕ ಎದುರಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವದುರ್ಗ ತಾಲೂಕು ಸೇರಿದಂತೆ ನಾರಾಯಣಪುರ ಕಾಲುವೆ ನೀರಾವರಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರೈತರು ಭತ್ತ ಹಾಗೂ ಮೆಣಸಿನಕಾಯಿ ಬೆಳೆಗಳನ್ನು ಬೆಳೆದಿದ್ದಾರೆ. ಭತ್ತದ ಬೆಳೆ ಕಟಾವಿನ ಹಂತ ತಲುಪಿದ್ದರೆ, ಮೆಣಸಿನಕಾಯಿ ಬೆಳೆಗೆ ಪ್ರಸ್ತುತ ನೀರಿನ ಅಗತ್ಯವಿದೆ. ಆದರೆ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯದ ಪರಿಣಾಮ ಮೆಣಸಿನಕಾಯಿ ಬೆಳೆ ಒಣಗಲು ಆರಂಭಿಸಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.

ನಾರಾಯಣಪುರ ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದರೂ ರೈತರ ಜಮೀನುಗಳಿಗೆ ನೀರು ತಲುಪಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿರುವ ಸಂದರ್ಭದಲ್ಲಿ ನೀರಾವರಿ ಇಲಾಖೆ ಹಾಗೂ ಸರ್ಕಾರ ತಕ್ಷಣ ಸ್ಪಂದಿಸಬೇಕು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರ ಹಿತದೃಷ್ಟಿಯಿಂದ ಕೈಗೊಳ್ಳಲಾಗಿರುವ ಈ ಪಾದಯಾತ್ರೆಗೆ ವಿವಿಧ ಮಠಗಳ ಮಠಾಧೀಶರು, ಪಕ್ಷಾತೀತ ರಾಜಕೀಯ ಮುಖಂಡರು, ರೈತಪರ ಸಂಘಟನೆಗಳು ಹಾಗೂ ಸಾಮಾಜಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಕೃಷಿ ಮತ್ತು ರೈತರ ಬದುಕು ಉಳಿಸುವ ಏಕೈಕ ಗುರಿಯೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ನವೆಂಬರ್ 15ರಂದು ಗಬ್ಬೂರಿನ ಶ್ರೀಮಠದಿಂದ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಮೊದಲ ದಿನ ಮೊಸರಕಲ್ಲಿನಲ್ಲಿ ರಾತ್ರಿ ವಾಸ್ತವ್ಯ ಮಾಡಲಾಗುವುದು. ನವೆಂಬರ್ 16ರಂದು ಅಮರಾಪುರ ಕ್ರಾಸ್, 17ರಂದು ತಿಂತಿಣಿ ಬ್ರಿಜ್‌ನ ಕನಕ ಗುರುಪೀಠ, 18ರಂದು ಬೆಲಸೆಟ್ಟಿಹಾಳ ಹಾಗೂ 19ರಂದು ಜೋಗುಂಡ ಬಾವಿಯಲ್ಲಿ ವಾಸ್ತವ್ಯ ಹೂಡಲಾಗುವುದು. ಮಾರ್ಗಮಧ್ಯೆ ವಿವಿಧ ಗ್ರಾಮಗಳ ರೈತರನ್ನು ಭೇಟಿ ಮಾಡಿ ನೀರಾವರಿ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ನವೆಂಬರ್ 20ರಂದು ಪಾದಯಾತ್ರೆ ನಾರಾಯಣಪುರ ಜಲಾಶಯ ತಲುಪಲಿದ್ದು, ಅಲ್ಲಿ ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವ ಮೂಲಕ ಬೆಳೆಗಳನ್ನು ರಕ್ಷಿಸಲು ಸರ್ಕಾರ ಹಾಗೂ ನೀರಾವರಿ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಹೋರಾಟದ ಪ್ರಮುಖ ಬೇಡಿಕೆಯಾಗಿದೆ ಎಂದರು.

ರೈತರು ಬೆಳೆದ ಬೆಳೆಗಳು ನೀರಿನ ಅಭಾವದಿಂದ ನಾಶವಾದರೆ ಅವರ ಕುಟುಂಬಗಳ ಜೀವನೋಪಾಯಕ್ಕೆ ಗಂಭೀರ ಹೊಡೆತ ಬೀಳಲಿದೆ. ಆದ್ದರಿಂದ ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೃಷಿಕರು ತಮ್ಮ ಹಕ್ಕುಗಳಿಗಾಗಿ ನಡೆಯುವ ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕೆ. ಮಸ್ತಾನ ನಾಯಕ್ ಪೂಜಾರಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಡಿ. ಸತ್ಯರೆಡ್ಡಿ, ಸಂಗಮೇಶ್, ಆಂಜನೇಯ ಶಾಸ್ತ್ರಿ, ಬಸವನಾಯಕ್ ಸೇರಿದಂತೆ ವಿವಿಧ ರೈತ ಮುಖಂಡರು ಉಪಸ್ಥಿತರಿದ್ದರು.