ರಾಯಚೂರು, ನ.13: ತತ್ವಪದಕಾರರು ಬಾಹ್ಯ ಆಡಂಬರ, ಅಂಧಶ್ರದ್ಧೆ ಹಾಗೂ ಕೇವಲ ಮೂರ್ತಿಪೂಜೆಗೆ ಸೀಮಿತವಾಗದೆ ಮನುಷ್ಯನ ಅಂತರಂಗದ ಶುದ್ಧತೆ, ಆತ್ಮಜ್ಞಾನ ಮತ್ತು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು ಎಂದು ‘ಸುದ್ದಿಮೂಲ’ ಪತ್ರಿಕೆಯ ಸಂಪಾದಕ ಬಸವರಾಜ ಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಎಸ್ಆರ್ಕೆ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಆದಿಕವಿ ಶ್ರೀ ಮಹರ್ಷಿ ವಿಶ್ವವಿದ್ಯಾಲಯ, ತೇಜಸ್ ಇಂಡಿಯಾ ಪ್ರಕಾಶನ, ಕಲಾ ಸಂಕುಲ ಸಂಸ್ಥೆ ಹಾಗೂ ಲೋಹಿಯಾ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಸಂಪಾದಕತ್ವದ ತತ್ವಪದಕಾರರ ಕುರಿತ 12 ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ತತ್ವಪದಕಾರರು ತಮ್ಮ ಅನುಭವದ ಮೂಲಕ ಜೀವನದ ಸತ್ಯಗಳನ್ನು ಜನಸಾಮಾನ್ಯರಿಗೆ ತಿಳಿಸಿಕೊಟ್ಟಿದ್ದಾರೆ. ಅವರ ಚಿಂತನೆಗಳನ್ನು ಬರಹ ಮತ್ತು ಗಾಯನದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನಗಳು ನಡೆದಿವೆ. ತತ್ವಪದಗಳ ಅರ್ಥ ಹಾಗೂ ವಿಶ್ಲೇಷಣೆ ಒಳಗೊಂಡಿರುವ ಈ ಕೃತಿಗಳು ಮುಂದಿನ ಪೀಳಿಗೆಯ ಅಧ್ಯಯನಕಾರರಿಗೆ ಮಾರ್ಗದರ್ಶಿಯಾಗಲಿವೆ ಎಂದರು.
ಕರ್ನಾಟಕ ತತ್ವಪದಕಾರರ ಮಾಲೆಯ ಸಂಪಾದಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಅನೇಕ ತತ್ವಪದಕಾರರು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯವನ್ನು ಗುರುತಿಸಿ, ಜನರ ನಡುವೆ ಉಳಿದಿರುವ ತತ್ವಪದಗಳನ್ನು ಸಂಗ್ರಹಿಸಿ ದಾಖಲಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
ಜನಪದ ಸಾಹಿತ್ಯ ಸಂಗ್ರಹದ ಮಾದರಿಯಲ್ಲಿ ತತ್ವಪದಗಳ ಸಂರಕ್ಷಣೆಗೆ ಮುಂದಾಗಬೇಕು. ಕಾರ್ಯಾಗಾರಗಳ ಮೂಲಕ ಅವುಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ತಾತ್ವಿಕ ಆಯಾಮಗಳನ್ನು ವಿಶ್ಲೇಷಿಸಬೇಕು. ಸಂಗ್ರಹಕಾರರಿಗೆ ಸಂಗೀತದ ಜ್ಞಾನವೂ ಅಗತ್ಯವಾಗಿದೆ. ತೇಜಸ್ ಇಂಡಿಯಾ ಪ್ರಕಾಶನವು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ 12 ಕೃತಿಗಳನ್ನು ಪ್ರಕಟಿಸಿದ್ದು, ಇನ್ನಷ್ಟು ತತ್ವಪದಕಾರರನ್ನು ಪರಿಚಯಿಸುವ ಅಗತ್ಯವಿದೆ ಎಂದರು.
ಕೃತಿಗಳ ಕುರಿತು ಮಾತನಾಡಿದ ಪ್ರಾಧ್ಯಾಪಕ ಡಾ. ದಸ್ತಗೀರಸಾಬ್ ದಿನ್ನಿ, ವಚನಕಾರರು ಹಾಗೂ ತತ್ವಪದಕಾರರು ಸಮಾಜವನ್ನು ಜಾಗೃತಗೊಳಿಸುವ, ಸೌಹಾರ್ದತೆ ಬೆಳೆಸುವ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಸಾಹಿತ್ಯ ರಚಿಸಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ತತ್ವಪದಕಾರರನ್ನು ಜಾತಿ, ಮತಗಳ ಚೌಕಟ್ಟಿನಲ್ಲಿ ಸೀಮಿತಗೊಳಿಸದೆ ಬಹುಮುಖ ದೃಷ್ಟಿಕೋನದಿಂದ ಅಧ್ಯಯನ ಮಾಡಬೇಕು. ಜನಸಾಮಾನ್ಯರ ಆಡುಭಾಷೆಯಲ್ಲಿಯೇ ಜೀವನದ ಪರಮಸತ್ಯವನ್ನು ಸಾರಿದ ಅವರ ಸಾಹಿತ್ಯವು ಸಾಮಾಜಿಕ ಅಸಮಾನತೆ ಮತ್ತು ಕಂದಾಚಾರಗಳನ್ನು ಪ್ರಶ್ನಿಸುವ ಶಕ್ತಿ ಹೊಂದಿದೆ ಎಂದರು.
ಸಮಾರಂಭದಲ್ಲಿ ಸಾಹಿತಿಗಳಾದ ವೀರಹನುಮಾನ, ಡಾ. ಜೆ.ಎಲ್. ಈರಣ್ಣ, ಡಾ. ಸಿ.ಬಿ. ಚಿಲ್ಕರಾಗಿ, ಡಾ. ದೇವೇಂದ್ರಪ್ಪ, ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ, ಲೋಹಿಯಾ ಪ್ರತಿಷ್ಠಾನದ ಭೀಮನಗೌಡ ಇಟಗಿ, ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ, ಪ್ರಕಾಶಕ ತೇಜಸ್ ಚಂದ್ರ, ಸಂಚಾಲಕ ಡಾ. ಜಿ.ಎಸ್. ಬಿರಾದಾರ, ಡಾ. ವಿರೂಪಾಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



