ರಾಯಚೂರು: ದೇವರಾಜ ಅರಸು ವಿಶೇಷ ವರ್ಗದ ಯೋಜನೆಯಡಿ ನಿವೇಶನ ಸೌಲಭ್ಯ ಪಡೆಯಲು ಎರಡು ವರ್ಷಗಳ ಹಿಂದೆಯೇ ಸಲ್ಲಿಸಿದ್ದ ಅರ್ಜಿಗಳು ಹಾಗೂ ಅಗತ್ಯ ದಾಖಲೆಗಳು ಸಂಬಂಧಪಟ್ಟ ಇಲಾಖೆಗಳಲ್ಲೇ ಕಳೆದುಹೋಗಿವೆ ಎಂದು ಆರೋಪಿಸಿರುವ ಫಲಾನುಭವಿಗಳು, ಅರ್ಜಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ನಗರದಲ್ಲಿ ನವೆಂಬರ್ 13ರಂದು ಆಯುಕ್ತರಿಗೆ ಮನವಿ ಸಲ್ಲಿಸಿದ ಫಲಾನುಭವಿಗಳು, ಸರ್ಕಾರದ ವಸತಿ ಹಾಗೂ ನಿವೇಶನ ಸೌಲಭ್ಯಗಳ ನಿರೀಕ್ಷೆಯಲ್ಲಿ ಎರಡು ವರ್ಷಗಳಿಂದ ಕಾಯುತ್ತಿರುವ ಬಡ ಕುಟುಂಬಗಳಿಗೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇವರಾಜ ಅರಸು ವಿಶೇಷ ವರ್ಗದ ಯೋಜನೆಯಡಿ ವಿಧವೆಯರು, ವಿಧುರರು, ಅಂಗವಿಕಲರು, ತರಕಾರಿ ಮಾರಾಟಗಾರರು, ಬೀದಿಬದಿ ವ್ಯಾಪಾರಿಗಳು, ಪೌರಕಾರ್ಮಿಕರು ಹಾಗೂ ಅಲೆಮಾರಿ ಸಮುದಾಯದವರು ಸೇರಿದಂತೆ ವಿವಿಧ ವರ್ಗಗಳ ಅರ್ಹ ಫಲಾನುಭವಿಗಳು ನಿವೇಶನ ಮಂಜೂರಾತಿಗಾಗಿ ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಇಲಾಖೆ ಹಾಗೂ ಇತರ ಸಂಬಂಧಪಟ್ಟ ಕಚೇರಿಗಳಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಗಳನ್ನು ಸಮರ್ಪಕವಾಗಿ ಸಂರಕ್ಷಿಸದೆ ಕಳೆದುಕೊಂಡಿರುವುದರಿಂದ ಫಲಾನುಭವಿಗಳು ಮತ್ತೆ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಯೋಜನೆಯಡಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ನಿಗದಿಯಾಗಿರುವ ಸಂದರ್ಭದಲ್ಲಿ ಈಗಾಗಲೇ ದಾಖಲೆಗಳನ್ನು ಒದಗಿಸಿರುವ ಫಲಾನುಭವಿಗಳಿಂದ ಮತ್ತೊಮ್ಮೆ ಸಂಪೂರ್ಣ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸುತ್ತಿರುವುದು ಸರಿಯಲ್ಲ. ಆರ್ಥಿಕವಾಗಿ ಹಿಂದುಳಿದವರು, ವಯೋವೃದ್ಧರು, ಅಂಗವಿಕಲರು ಹಾಗೂ ದಿನಗೂಲಿ ಕೆಲಸ ಮಾಡುವವರು ಅಗತ್ಯ ದಾಖಲೆಗಳನ್ನು ಮರುಸಂಗ್ರಹಿಸಲು ಸಮಯ ಮತ್ತು ಹಣ ವ್ಯಯಿಸಬೇಕಾಗುತ್ತದೆ. ಇದರಿಂದ ಅರ್ಹ ಫಲಾನುಭವಿಗಳು ಯೋಜನೆಯ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಹಿಂದೆ ಸಲ್ಲಿಕೆಯಾಗಿರುವ ಅರ್ಜಿಗಳು ಹಾಗೂ ದಾಖಲೆಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ಸಮಗ್ರ ಪರಿಶೀಲನೆ ನಡೆಸಬೇಕು. ಅರ್ಜಿಗಳು ಯಾವ ಹಂತದಲ್ಲಿ ನಾಪತ್ತೆಯಾಗಿವೆ ಎಂಬುದನ್ನು ಪತ್ತೆಹಚ್ಚಿ, ಫಲಾನುಭವಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಅರ್ಜಿ ಸಲ್ಲಿಸಿರುವವರನ್ನು ಹೊಸ ಅರ್ಜಿದಾರರೆಂದು ಪರಿಗಣಿಸದೆ, ಅವರ ಹಿಂದಿನ ಅರ್ಜಿಗಳ ಆಧಾರದಲ್ಲಿಯೇ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಈ ಹಿಂದೆ ಸಲ್ಲಿಸಿದ ದಾಖಲೆಗಳು ಪತ್ತೆಯಾಗದಿದ್ದರೆ, ಫಲಾನುಭವಿಗಳಿಗೆ ಹೊಸದಾಗಿ ದಾಖಲೆಗಳನ್ನು ಸಂಗ್ರಹಿಸಿ ಅರ್ಜಿ ಸಲ್ಲಿಸಲು ಕನಿಷ್ಠ ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಬೇಕು. ದಾಖಲೆಗಳ ನಿರ್ವಹಣೆಯಲ್ಲಿ ಲೋಪವೆಸಗಿರುವ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಬಡವರು ಹಾಗೂ ದುರ್ಬಲ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಹರಿಗೆ ತಲುಪದಿರುವುದು ವಿಷಾದನೀಯ. ಮಹಾನಗರ ಪಾಲಿಕೆ ಆಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅರ್ಹ ಫಲಾನುಭವಿಗಳಿಗೆ ನಿವೇಶನ ಸೌಲಭ್ಯ ದೊರೆಯುವಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜನಾರ್ಧನ್, ಬಸವರಾಜ ಹೊಸೂರು, ಎಸ್. ನಾಗರಾಜ್, ಜಿ. ರಾಜು, ತಾಯಪ್ಪ, ಪಾರ್ವತಿ, ಶಾರದಮ್ಮ, ಯಲ್ಲಪ್ಪ, ಶಂಕ್ರಪ್ಪ, ದೊಡ್ಡಮ್ಮ, ರಂಗಮ್ಮ, ಕಮಲಮ್ಮ, ಯಂಕಮ್ಮ, ನರಸಮ್ಮ ಸೇರಿದಂತೆ ಅನೇಕ ಫಲಾನುಭವಿಗಳು ಉಪಸ್ಥಿತರಿದ್ದರು.



