ರಾಯಚೂರು: ಶರಣರ ವೈಚಾರಿಕ ಚಿಂತನೆಗಳು, ವಚನ ಸಾಹಿತ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮನಸ್ಸಿನ ಮಲಿನತೆ ದೂರವಾಗಿ ಬದುಕಿಗೆ ಹೊಸ ದಿಕ್ಕು ದೊರೆಯುತ್ತದೆ. ಸಮಾಜದಲ್ಲಿ ನೈತಿಕತೆ, ಸಮಾನತೆ ಹಾಗೂ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಲು ಶರಣರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ವೀರಹನುಮಾನ್ ರಾಯಚೂರು ಅಭಿಪ್ರಾಯಪಟ್ಟರು.
ನಗರದ ಮಾರುತಿ ನಗರ ಬಡಾವಣೆಯ ಶ್ರೀ ಗಿರಿ ಅಭಯಾಂಜನೇಯ ಸ್ವಾಮಿ ಸೇವಾ ಸಮಿತಿ ವತಿಯಿಂದ ಅಮಾವಾಸ್ಯೆ ಪ್ರಯುಕ್ತ ಆಯೋಜಿಸಿದ್ದ 60ನೇ ಶರಣ ಚಿಂತನ ಶಿವಾನುಭವ ಗೋಷ್ಠಿ ಹಾಗೂ ‘ಅಕ್ಕ ನಾಗಲಾಂಬಿಕೆ’ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಜಾತಿ, ವರ್ಗ ಹಾಗೂ ಸಾಮಾಜಿಕ ಅಸಮಾನತೆಗಳಿಂದ ಮನುಷ್ಯನನ್ನು ಮನುಷ್ಯನಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಕಾಲಘಟ್ಟದಲ್ಲಿ ಜಗಜ್ಯೋತಿ ಬಸವಣ್ಣನವರು ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶ ಸಾರುವ ಮೂಲಕ ಮಾನವೀಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಗೌರವಯುತವಾಗಿ ಬದುಕಬೇಕು ಎಂಬ ತತ್ವವನ್ನು ಪ್ರತಿಪಾದಿಸಿ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು ಎಂದು ಹೇಳಿದರು.
ಬಟ್ಟೆ ಕೊಳೆಯಾದರೆ ಮಡಿವಾಳ ಅದನ್ನು ಸ್ವಚ್ಛಗೊಳಿಸುತ್ತಾನೆ. ಆದರೆ ಮನಸ್ಸು ಮಲಿನಗೊಂಡಾಗ ಅದನ್ನು ಶುದ್ಧೀಕರಿಸುವುದು ಹೇಗೆ ಎಂಬ ಪ್ರಶ್ನೆಗೆ ಶರಣರ ವಚನಗಳು ಹಾಗೂ ವೈಚಾರಿಕ ಚಿಂತನೆಗಳಲ್ಲಿ ಉತ್ತರ ದೊರೆಯುತ್ತದೆ. ಇಂತಹ ಶರಣ ಚಿಂತನ ಗೋಷ್ಠಿಗಳು ಮನುಷ್ಯನ ಆಲೋಚನೆಗಳನ್ನು ಪರಿಷ್ಕರಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು.
ಶ್ರೀ ಗಿರಿ ಅಭಯಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಿರಂತರವಾಗಿ ನಡೆಯುತ್ತಿರುವ ಶಿವಾನುಭವ ಗೋಷ್ಠಿಗಳು ಜನರಿಗೆ ಮಾನಸಿಕ ನೆಮ್ಮದಿ ನೀಡುವುದರ ಜೊತೆಗೆ ಜೀವನದ ಉದ್ದೇಶವನ್ನು ಅರಿಯುವ ಅವಕಾಶ ಕಲ್ಪಿಸುತ್ತಿವೆ. ನಗರದ ಜನರನ್ನು ಒಂದೆಡೆ ಸೇರಿಸಿ ಶರಣರ ತತ್ವಗಳನ್ನು ಪರಿಚಯಿಸುವ ಮೂಲಕ ನೈತಿಕ ಬದುಕಿನ ಮಹತ್ವವನ್ನು ತಿಳಿಸಿಕೊಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
12ನೇ ಶತಮಾನದ ಅನುಭವ ಮಂಟಪವು ಸಮಾನತೆ ಮತ್ತು ವಿಚಾರ ವಿನಿಮಯಕ್ಕೆ ವೇದಿಕೆಯಾಗಿತ್ತು. ವಿವಿಧ ಕಾಯಕಗಳಲ್ಲಿ ತೊಡಗಿದ್ದ ಶರಣರು ಒಂದೆಡೆ ಸೇರಿ ಸಾಮಾಜಿಕ ಸಮಸ್ಯೆಗಳು, ಮಾನವೀಯ ಮೌಲ್ಯಗಳು ಹಾಗೂ ಜೀವನದ ಕುರಿತು ಚರ್ಚಿಸುತ್ತಿದ್ದರು. ಆ ಚಿಂತನೆಗಳು ಇಂದಿನ ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳಿಗೂ ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಇಂದಿನ ಕುಟುಂಬಗಳಲ್ಲಿ ಹಿರಿಯರು ಮತ್ತು ಕಿರಿಯರ ನಡುವೆ ಸಂವಾದ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಕುಟುಂಬ ಸದಸ್ಯರು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ದೂರದರ್ಶನದ ಕೆಲವು ಧಾರಾವಾಹಿಗಳಲ್ಲಿ ಬಿಂಬಿಸುವ ಕೌಟುಂಬಿಕ ಕಲಹಗಳು ಮತ್ತು ನಕಾರಾತ್ಮಕ ವಿಚಾರಗಳಿಂದ ಪ್ರಭಾವಿತರಾಗದೆ, ಉತ್ತಮ ಸಾಹಿತ್ಯ, ಶರಣರ ಚಿಂತನೆ ಹಾಗೂ ಮೌಲ್ಯಾಧಾರಿತ ಕಾರ್ಯಕ್ರಮಗಳತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಶಿವಾನುಭವ ಗೋಷ್ಠಿಗಳಲ್ಲಿ ಕೇಳುವ ಉಪನ್ಯಾಸಗಳನ್ನು ಕೇವಲ ಆಲಿಸುವುದಕ್ಕೆ ಸೀಮಿತಗೊಳಿಸದೆ, ಅವುಗಳಲ್ಲಿ ಅಡಕವಾಗಿರುವ ಉತ್ತಮ ವಿಚಾರಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ, ಮಾನವ ಜನ್ಮ ಅತ್ಯಂತ ಅಮೂಲ್ಯವಾದದ್ದು. ಬದುಕನ್ನು ಸ್ವಾರ್ಥಕ್ಕಾಗಿ ವ್ಯರ್ಥ ಮಾಡದೆ ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಬಡವರು, ದೀನದಲಿತರು ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದರಲ್ಲಿ ದೊರೆಯುವ ಆತ್ಮತೃಪ್ತಿ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ಪರೋಪಕಾರ ಮತ್ತು ಮಾನವೀಯ ಸೇವೆಯೇ ಜೀವನದ ನಿಜವಾದ ಸಾರ್ಥಕತೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರವೀಂದ್ರ ಜಲ್ದಾರ್ ಮಾತನಾಡಿ, ಕಳೆದ 60 ತಿಂಗಳುಗಳಿಂದ ನಿರಂತರವಾಗಿ ಶರಣ ಚಿಂತನ ಗೋಷ್ಠಿಗಳನ್ನು ಆಯೋಜಿಸುತ್ತಿರುವ ಶ್ರೀ ಗಿರಿ ಅಭಯಾಂಜನೇಯ ಸ್ವಾಮಿ ಸೇವಾ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ. ಶರಣರ ಕಾಯಕ ಮತ್ತು ದಾಸೋಹ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದುಡಿಮೆಯಿಂದ ಗಳಿಸಿದ ಆದಾಯದಲ್ಲಿ ಒಂದು ಭಾಗವನ್ನು ಸಮಾಜದ ಒಳಿತಿಗೆ ಮೀಸಲಿಟ್ಟು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಇಂತಹ ಸೇವಾ ಮನೋಭಾವದಿಂದ ಸಮಾಜದಲ್ಲಿ ಸೌಹಾರ್ದತೆ ಹಾಗೂ ಮಾನವೀಯ ಸಂಬಂಧಗಳು ವೃದ್ಧಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾ ಸಮಿತಿ ಅಧ್ಯಕ್ಷ ಬಿ. ಬಸವರಾಜ್, ಕಳೆದ 59 ತಿಂಗಳುಗಳಿಂದ ಪ್ರತೀ ಅಮಾವಾಸ್ಯೆಯಂದು ಶರಣ ಚಿಂತನ ಗೋಷ್ಠಿ ಹಾಗೂ ಅನ್ನದಾಸೋಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ವಿವಿಧ ಮಠಗಳ ಸ್ವಾಮೀಜಿಗಳು, ಹಿರಿಯ ಸಾಹಿತಿಗಳು ಹಾಗೂ ಉಪನ್ಯಾಸಕರನ್ನು ಆಹ್ವಾನಿಸಿ ಜನರಲ್ಲಿ ಶರಣರ ತತ್ವಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಮಿತಿಯ ವತಿಯಿಂದ ಅನುಭವ ಮಂಟಪದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ನಾಟಕ, ಸಂಗೀತ, ಸಾಹಿತ್ಯ, ಶರಣ ಚಿಂತನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಮಂಟಪವನ್ನು ಬಳಸಿಕೊಳ್ಳುವ ಉದ್ದೇಶವಿದೆ. ಪ್ರಸಕ್ತ ವರ್ಷ ‘ಅಭಯಾಂತರಂಗ’ ಕೃತಿಯನ್ನು ಪ್ರಕಟಿಸಿ ಎರಡು ಸಾವಿರ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡುವ ಮೂಲಕ ಸಂಗ್ರಹವಾಗುವ ಹಣವನ್ನು ಅನುಭವ ಮಂಟಪದ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ವಿವರಿಸಿದರು.
ಶರಣರು ಹಾಗೂ ಸಂತರ ಜೀವನ ಸಂದೇಶಗಳನ್ನು ರಾಯಚೂರು ನಗರದ ಪ್ರತಿಯೊಂದು ಮನೆಗೂ ತಲುಪಿಸುವ ಗುರಿ ಹೊಂದಲಾಗಿದೆ. ಸೂರ್ಯೋದಯ ವಾಕಿಂಗ್ ಕ್ಲಬ್, ಮಾರುತಿ ನಗರದ ನಿವಾಸಿಗಳು ಹಾಗೂ ನಗರದ ನಾಗರಿಕರ ಸಹಕಾರದಿಂದ ಇಂತಹ ಧಾರ್ಮಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲು ಸಾಧ್ಯವಾಗಿದೆ ಎಂದು ಬಸವರಾಜ್ ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ವೀರಹನುಮಾನ್ ರಾಯಚೂರು, ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೇದಾಂತ ಕಾಲೇಜಿನ ರಾಕೇಶ ರಾಜಲಬಂಡಿ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಮಾವಾಸ್ಯೆ ಅನ್ನದಾಸೋಹ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ದಾನಿಗಳನ್ನೂ ಸತ್ಕರಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಶಿಲ್ಪಾ ಮೆಡಿಕೇರ್ನ ಮುಖ್ಯ ಲೆಕ್ಕಾಧಿಕಾರಿ ಪ್ರಹ್ಲಾದ್ ರಾವ್, ರಾಯಚೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ. ಗೋವಿಂದು, ಬಿಜೆಪಿ ಯುವ ಮುಖಂಡ ಯು. ನರಸರೆಡ್ಡಿ, ಸೀತಾ ನಾಯಕ್ ಹಾಗೂ ಅನ್ನದಾಸೋಹ ಸಂಯೋಜಕ ಸದಾಶಿವಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕೆ. ಕರಿಯಪ್ಪ ಪ್ರಾರ್ಥಿಸಿದರು. ಮರಿಲಿಂಗಪ್ಪ ಮಡಿವಾಳ ಸ್ವಾಗತಿಸಿದರು. ಸುರೇಶ ನಿರೂಪಿಸಿದರು. ನರಸಿಂಹಲು ಉಪ್ರಾಳ ವಂದಿಸಿದರು. ಸೂರ್ಯೋದಯ ವಾಕಿಂಗ್ ಕ್ಲಬ್, ಶ್ರೀ ಗಿರಿ ಅಭಯಾಂಜನೇಯ ಸ್ವಾಮಿ ಸೇವಾ ಸಮಿತಿ, ಮಹಿಳಾ ಮಂಡಳಿ ಹಾಗೂ ಯುವ ಗಜಾನನ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಸಿರಿಗೆರೆಯ ಧಾತ್ರಿ ರಂಗ ಸಂಸ್ಥೆಯ ಕಲಾವಿದರಿಂದ ‘ಅಕ್ಕ ನಾಗಲಾಂಬಿಕೆ’ ನಾಟಕ ಪ್ರದರ್ಶನ ನಡೆಯಿತು. ಶರಣ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿಂಬಿಸಿದ ನಾಟಕವು ನೂರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.



