ಮಾನ್ವಿ: ತಾಲೂಕಿನ ನಂದಿಹಾಳ ಹಳ್ಳಕ್ಕೆ ಗೊಲ್ಲದಿನ್ನಿ ಎಸ್ಕೇಪ್ ಮೂಲಕ ನೀರು ಹರಿಸಿ ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಹಳ್ಳದ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರಾಜಲದಿನ್ನಿ ಗ್ರಾಮದ ಶಿವಶಂಕರಯ್ಯ ಸ್ವಾಮಿ, ಪ್ರಸಕ್ತ ವರ್ಷ ಸಮರ್ಪಕ ಮಳೆಯಾಗದ ಪರಿಣಾಮ ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಕೊಳವೆಬಾವಿಗಳು ಸೇರಿದಂತೆ ವಿವಿಧ ಜಲಮೂಲಗಳು ಬತ್ತಿಹೋಗಿದ್ದು, ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದರು.

ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರೈತರು ತಮ್ಮ ಜಾನುವಾರುಗಳಿಗೆ ನೀರು ಒದಗಿಸಲು ಪರದಾಡುವಂತಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ನಂದಿಹಾಳ ಹಳ್ಳಕ್ಕೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಗೊಲ್ಲದಿನ್ನಿ ಎಸ್ಕೇಪ್ ಮೂಲಕ ನಂದಿಹಾಳ ಹಳ್ಳಕ್ಕೆ ನೀರು ಹರಿಸಿದರೆ ತಾಲೂಕಿನ ಜಾನೇಕಲ್, ಅಮರಾವತಿ, ನಸ್ಲಾಪುರ, ನಂದಿಹಾಳ, ರಾಜಲದಿನ್ನಿ, ಯರಮಲದೊಡ್ಡಿ, ಮುಸ್ಟೂರು, ರಂಗದಾಳ ಹಾಗೂ ಬುದ್ದಿನ್ನಿ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಹಳ್ಳದಲ್ಲಿ ನೀರು ಹರಿಯುವುದರಿಂದ ಸುತ್ತಮುತ್ತಲಿನ ಜಲಮೂಲಗಳಿಗೂ ನೆರವಾಗುವುದರ ಜೊತೆಗೆ ಜನರು ಹಾಗೂ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಈಗಾಗಲೇ ಮಳೆಯ ಕೊರತೆಯಿಂದ ರೈತರು ಬೆಳೆ ನಷ್ಟ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅದರ ಜೊತೆಗೆ ಕುಡಿಯುವ ನೀರಿನ ಅಭಾವವೂ ಉಂಟಾಗಿರುವುದರಿಂದ ಗ್ರಾಮೀಣ ಜನರ ಬದುಕು ಮತ್ತಷ್ಟು ಕಷ್ಟಕರವಾಗಿದೆ. ಆದ್ದರಿಂದ ನೀರಾವರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ತುರ್ತಾಗಿ ಹಳ್ಳಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಕ್ಟೋಬರ್ 17ರೊಳಗೆ ಗೊಲ್ಲದಿನ್ನಿ ಎಸ್ಕೇಪ್ ಮೂಲಕ ನಂದಿಹಾಳ ಹಳ್ಳಕ್ಕೆ ನೀರು ಹರಿಸದಿದ್ದರೆ, ಅಂದು ಬೆಳಿಗ್ಗೆ 10 ಗಂಟೆಯಿಂದ ನಂದಿಹಾಳ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಯ ಸೇತುವೆ ಬಳಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಹೋರಾಟದಲ್ಲಿ ನಂದಿಹಾಳ ಹಳ್ಳದ ದಡದಲ್ಲಿರುವ ಜಾನೇಕಲ್, ಅಮರಾವತಿ, ನಸ್ಲಾಪುರ, ನಂದಿಹಾಳ, ರಾಜಲದಿನ್ನಿ, ಯರಮಲದೊಡ್ಡಿ, ಮುಸ್ಟೂರು, ರಂಗದಾಳ ಹಾಗೂ ಬುದ್ದಿನ್ನಿ ಗ್ರಾಮಗಳ ಸಾವಿರಾರು ಜನರು ಭಾಗವಹಿಸಲಿದ್ದಾರೆ. ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಿಗದಿತ ಅವಧಿಯೊಳಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶರಣಬಸವ ನಸ್ಲಾಪುರ, ರಾಮನಗೌಡ ನಂದಿಹಾಳ, ನಬೀಸಾಬ್, ಅಮರೇಶಗೌಡ ಪೊಲೀಸ್ ಪಾಟೀಲ್, ಚನ್ನಬಸವ, ಹುಸೇನಪ್ಪ, ರವಿಕುಮಾರ ಪಾಟೀಲ್, ಈರಯ್ಯ ಪೂಜಾರಿ, ಶಿವಣ್ಣ, ಶರಣಬಸಪ್ಪಗೌಡ, ರಾಜಾವಿರುಪಾಕ್ಷಯ್ಯ ಸ್ವಾಮಿ, ಮಲ್ಲಯ್ಯ ಸ್ವಾಮಿ, ರಮೇಶ, ಶೇಷಾರೆಡ್ಡಿ, ಮಧುಸೂಧನ್ ರೆಡ್ಡಿ, ಆಂಜನೇಯ ನಾಯಕ, ಲಕ್ಷ್ಮೀರೆಡ್ಡಿ, ರಾಮಕೃಷ್ಣ, ವಿಠೋಬ ನಾಯಕ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.