ದೇವದುರ್ಗ, ಅ. 30: ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿಯ ಹಕ್ಕುಪತ್ರ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ನವೆಂಬರ್ 2 ಮತ್ತು 3ರಂದು ಪಟ್ಟಣದ ಮಿನಿ ವಿಧಾನಸೌಧದ ಎದುರು ಎರಡು ದಿನಗಳ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಅಂಚೆಸಗೂರು ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದುರ್ಗ ಹಾಗೂ ಅರಕೇರಾ ತಾಲೂಕುಗಳಲ್ಲಿ ಸಾವಿರಾರು ಭೂಹೀನ ಬಡ ರೈತರು ಮತ್ತು ಕೃಷಿ ಕಾರ್ಮಿಕರು ಸರ್ಕಾರಿ ಕಂದಾಯ ಭೂಮಿ ಹಾಗೂ ಅರಣ್ಯದಂಚಿನ ಜಮೀನುಗಳಲ್ಲಿ ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಳೆದ 70ರಿಂದ 80 ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೂ ಅನೇಕ ಕುಟುಂಬಗಳಿಗೆ ಇದುವರೆಗೆ ಭೂಮಿಯ ಮಾಲೀಕತ್ವದ ಹಕ್ಕುಪತ್ರ ದೊರೆತಿಲ್ಲ. ಇದರಿಂದ ರೈತರು ನಿರಂತರ ಅನಿಶ್ಚಿತತೆಯಲ್ಲಿ ಬದುಕುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭೂಮಿಯ ಹಕ್ಕುಪತ್ರ ಇಲ್ಲದ ಕಾರಣ ರೈತರಿಗೆ ಬ್ಯಾಂಕುಗಳಿಂದ ಬೆಳೆ ಸಾಲ ಹಾಗೂ ಕೃಷಿ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬಂಡವಾಳಕ್ಕಾಗಿ ಖಾಸಗಿ ಸಾಲದಾತರನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಬಡ್ಡಿದರದ ಸಾಲದಿಂದ ಬಡ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಾಗುವಳಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಬಗರ್ ಹುಕುಂ ಸಾಗುವಳಿದಾರರು ನಮೂನೆ 50, 53 ಮತ್ತು 57ರ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಅರ್ಹರಿಗೆ ಹಕ್ಕುಪತ್ರ ವಿತರಿಸಬೇಕು. ದೇವದುರ್ಗ ತಾಲೂಕಿನಲ್ಲಿ ಭೂ ಮಂಜೂರಾತಿ ಸಮಿತಿ ರಚನೆಯಾಗಿದ್ದರೂ ಅರ್ಜಿಗಳ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಪರಿಣಾಮವಾಗಿ ವರ್ಷಗಳಿಂದ ಅರ್ಜಿ ಸಲ್ಲಿಸಿ ಕಾಯುತ್ತಿರುವ ರೈತರಿಗೆ ಯಾವುದೇ ಪರಿಹಾರ ದೊರೆತಿಲ್ಲ. ತಹಶೀಲ್ದಾರರು ಕೂಡಲೇ ಸಮಿತಿಯ ಸಭೆ ಕರೆದು ಬಾಕಿ ಅರ್ಜಿಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದೇವದುರ್ಗ ಮತ್ತು ಅರಕೇರಾ ತಾಲೂಕುಗಳ ಭೂ ಮಂಜೂರಾತಿ ಸಮಿತಿಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ಗೊಂದಲಗಳನ್ನು ನಿವಾರಿಸಬೇಕು. ಅರಕೇರಾ ತಾಲೂಕಿನಲ್ಲಿ ಕಂದಾಯ ಭೂಮಿಯನ್ನು ಅರಣ್ಯ ಭೂಮಿಯಾಗಿ ಪರಿವರ್ತಿಸುವ ಕ್ರಮವನ್ನು ಕೈಬಿಡಬೇಕು. ಅರಣ್ಯದಂಚಿನ ಜಮೀನುಗಳಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಭೂಮಿಯನ್ನೇ ನಂಬಿ ಬದುಕುತ್ತಿರುವ ಬಡ ರೈತರಿಗೆ ಹಕ್ಕುಪತ್ರ ನೀಡದೆ ವಿಳಂಬ ಮಾಡುತ್ತಿರುವುದು ಅವರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸಾಗುವಳಿದಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಎರಡು ದಿನಗಳ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ನವೆಂಬರ್ 2 ಮತ್ತು 3ರಂದು ನಡೆಯಲಿರುವ ಧರಣಿಯಲ್ಲಿ ದೇವದುರ್ಗ ಹಾಗೂ ಅರಕೇರಾ ತಾಲೂಕುಗಳ ಬಗರ್ ಹುಕುಂ ಸಾಗುವಳಿದಾರರು, ಭೂಹೀನ ರೈತರು ಮತ್ತು ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮಲ್ಲನಗೌಡ ಅಂಚೆಸಗೂರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ತಾಲೂಕು ಕಾರ್ಯದರ್ಶಿ ದುರ್ಗಣ್ಣ ಅಡಕಲಾಗುಡ್ಡ, ಹುಸೇನಪ್ಪ ಚಿಂಚೋಡಿ, ಮಹಮ್ಮದ್ ಸಾಬ್ ಕಕ್ಕಲದಡ್ಡಿ ಹಾಗೂ ನಾಗರಾಜ ಹಿರೇರಾಯಕುಂಪಿ ಉಪಸ್ಥಿತರಿದ್ದರು.