ದೇವದುರ್ಗ, ಅ. 29: ದೇವದುರ್ಗ ಪಟ್ಟಣದಲ್ಲಿರುವ ರಕ್ತನಿಧಿ ಕೇಂದ್ರವನ್ನು ಆಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಿ, ಜಿಲ್ಲಾಮಟ್ಟದ ರಕ್ತನಿಧಿ ಕೇಂದ್ರಕ್ಕೆ ಸಮಾನವಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾದರಿಯಾಗಿ ಅಭಿವೃದ್ಧಿಪಡಿಸಬೇಕು ಎಂದು ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ ಅಭಿಪ್ರಾಯಪಟ್ಟರು.

ಪಟ್ಟಣದ ರಕ್ತನಿಧಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯನಿರ್ವಹಣೆ, ಲಭ್ಯವಿರುವ ಸೌಲಭ್ಯಗಳು ಹಾಗೂ ರಕ್ತ ಸಂಗ್ರಹಣೆ ವ್ಯವಸ್ಥೆಯನ್ನು ವೀಕ್ಷಿಸಿದ ಅವರು, ಕೇಂದ್ರದ ವ್ಯವಸ್ಥಾಪಕ ವಿಶ್ವನಾಥ ಕೋರಿ ಅವರ ಸೇವಾ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ರಕ್ತದಾನವು ಅತ್ಯಂತ ಶ್ರೇಷ್ಠ ಮಾನವೀಯ ಸೇವೆಯಾಗಿದ್ದು, ತುರ್ತು ಸಂದರ್ಭಗಳಲ್ಲಿ ರಕ್ತದ ಲಭ್ಯತೆ ಅನೇಕ ಅಮೂಲ್ಯ ಜೀವಗಳನ್ನು ಉಳಿಸಲು ನೆರವಾಗುತ್ತದೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ರಕ್ತನಿಧಿ ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯ, ಆಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಕಲ್ಪಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ದೇವದುರ್ಗ ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯಿಂದ ಹೊರಬರಬೇಕಾದರೆ ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಡವರು ಮತ್ತು ಸಾಮಾನ್ಯ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳು ಸ್ಥಳೀಯವಾಗಿಯೇ ದೊರೆಯುವಂತಾಗಬೇಕು ಎಂದು ಹೇಳಿದರು.

ದೇವದುರ್ಗದ ರಕ್ತನಿಧಿ ಕೇಂದ್ರವನ್ನು ಜಿಲ್ಲಾಮಟ್ಟದ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸುವ ಮೂಲಕ ರಕ್ತದ ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ ನೆರವಾಗುವ ವ್ಯವಸ್ಥೆಯನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ತಮ್ಮಿಂದ ಸಾಧ್ಯವಿರುವ ಸಹಕಾರ ನೀಡುವುದಾಗಿ ಸಂಸದ ಜಿ. ಕುಮಾರ ನಾಯಕ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜಶೇಖರ ನಾಯಕ, ಜಿಲ್ಲಾಧ್ಯಕ್ಷ ಶಾಂತಪ್ಪ, ಪ್ರಕಾಶ ಖೇಣೇದ, ಬಸವರಾಜಪ್ಪ ಬಂಡೇಗುಡ್ಡ ಸಾಹು, ಶರಣಗೌಡ ಗೌರಂಪೇಟ ಸೇರಿದಂತೆ ಹಲವು ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.