ಜಾಲಹಳ್ಳಿ: ದೇವದುರ್ಗ ತಾಲೂಕಿನ ಜಾಲಹಳ್ಳಿಯ ಸುಕ್ಷೇತ್ರ ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ ಭಾಗವಹಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿವಾಹದ ಹೆಸರಿನಲ್ಲಿ ನಡೆಯುವ ಅನಗತ್ಯ ದುಂದುವೆಚ್ಚವನ್ನು ತಗ್ಗಿಸಲು ಸಾಮೂಹಿಕ ವಿವಾಹಗಳು ಉತ್ತಮ ಮಾರ್ಗವಾಗಿವೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಇಂತಹ ಕಾರ್ಯಕ್ರಮಗಳು ನೆರವಾಗುವುದರ ಜೊತೆಗೆ ಸಮಾಜದಲ್ಲಿ ಸರಳತೆ, ಸಮಾನತೆ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ವಿವಾಹವೆಂದರೆ ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವಲ್ಲ. ಎರಡು ಕುಟುಂಬಗಳನ್ನು ಬೆಸೆಯುವ ಪವಿತ್ರ ಬಂಧವಾಗಿದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಗೌರವ, ನಂಬಿಕೆ, ಪ್ರೀತಿ ಹಾಗೂ ಹೊಂದಾಣಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಹೊಸ ಜೀವನ ಆರಂಭಿಸಿರುವ ದಂಪತಿಗಳು ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಹಾರೈಸಿದರು.

ಸಾಮಾಜಿಕ ಕಳಕಳಿಯಿಂದ ಆಯೋಜಿಸುವ ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆ ಕಡಿಮೆ ಮಾಡುವುದರೊಂದಿಗೆ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತವೆ. ಇಂತಹ ಕಾರ್ಯಕ್ರಮಗಳಿಗೆ ಸಮಾಜದ ಎಲ್ಲ ವರ್ಗದ ಜನರು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ತಿಳಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಕಾಶಿ ಜಗದ್ಗುರುಗಳು, ಶ್ರೀ ಜಯಶಾಂತ ಲಿಂಗೇಶ್ವರ ಸ್ವಾಮೀಜಿ ಹಾಗೂ ಮುಂಡರಗಿ ತಾತನವರು ನವವಿವಾಹಿತರಿಗೆ ಆಶೀರ್ವಚನ ನೀಡಿ, ದಾಂಪತ್ಯ ಜೀವನದಲ್ಲಿ ಧರ್ಮ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶ ಕುಟುಂಬ ಜೀವನ ನಡೆಸುವಂತೆ ಶುಭ ಹಾರೈಸಿದರು.

ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನದ ಆವರಣದಲ್ಲಿ ನಡೆದ ವಿವಾಹ ಸಮಾರಂಭವು ಧಾರ್ಮಿಕ ಹಾಗೂ ಸಾಮಾಜಿಕ ಸೌಹಾರ್ದತೆಯ ವಾತಾವರಣಕ್ಕೆ ಸಾಕ್ಷಿಯಾಯಿತು. ನವಜೋಡಿಗಳ ಕುಟುಂಬಸ್ಥರು, ಬಂಧುಬಳಗ, ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನವದಂಪತಿಗಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸ್ಥಳೀಯ ಗಣ್ಯರು ಹಾಗೂ ದೇವಸ್ಥಾನದ ಭಕ್ತರು ಉಪಸ್ಥಿತರಿದ್ದರು.