ದೇವದುರ್ಗ: ಕುಟುಂಬ ಸಂಬಂಧಗಳು, ಪ್ರೀತಿ, ಸ್ನೇಹ, ತ್ಯಾಗ ಹಾಗೂ ಮಾನವೀಯ ಮೌಲ್ಯಗಳನ್ನು ಮನಮುಟ್ಟುವಂತೆ ಚಿತ್ರಿಸಿರುವ ‘ಪ್ರೇಮದ ಊರಲಿ’ ಕನ್ನಡ ಚಲನಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀದೇವಿ ರಾಜಶೇಖರ ನಾಯಕ ಅಭಿಪ್ರಾಯಪಟ್ಟರು.

ಪಟ್ಟಣದ ಭಾರತ್ ಟಾಕೀಸ್ ಚಿತ್ರಮಂದಿರದಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ‘ಪ್ರೇಮದ ಊರಲಿ’ ಚಲನಚಿತ್ರ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಿದ ಅವರು, ಚಿತ್ರ ವೀಕ್ಷಿಸಿದ ಬಳಿಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸೆಪ್ಟೆಂಬರ್ 25ರಂದು ರಾಜ್ಯದ 60 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಅಕ್ಟೋಬರ್ 29ರ ನಂತರವೂ ಪ್ರದರ್ಶನಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಬುಕ್ ಮೈ ಶೋನಲ್ಲಿ ಚಿತ್ರಕ್ಕೆ 9.9 ರೇಟಿಂಗ್ ದೊರೆತಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದಲ್ಲಿ ತಂದೆ-ಮಗನ ಬಾಂಧವ್ಯ, ಅಣ್ಣ-ತಂಗಿಯ ಪ್ರೀತಿ, ಸ್ನೇಹಿತರ ನಡುವಿನ ವಿಶ್ವಾಸ ಹಾಗೂ ಪ್ರೇಮಿಗಳ ಭಾವನೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ತಾಯಿಯಿಲ್ಲದ ಮಗನನ್ನು ತಂದೆಯೊಬ್ಬ ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ರೂಪಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಕಥಾಹಂದರ ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುತ್ತದೆ ಎಂದು ಹೇಳಿದರು.

ನಾಗಣ್ಣ, ಸಂತು, ರುಕ್ಮಿಣಿ ಹಾಗೂ ವಸಂತ ಪಾತ್ರಗಳು ಬದುಕಿನ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುತ್ತವೆ. ಕುಟುಂಬದ ಸದಸ್ಯರು ಮನೆಯ ನಾಲ್ಕು ಗೋಡೆಗಳಂತಿದ್ದರೆ, ತಂದೆ ಆ ಕುಟುಂಬಕ್ಕೆ ರಕ್ಷಣೆಯ ಮೇಲ್ಚಾವಣಿಯಂತೆ ನಿಲ್ಲುವ ಸಂದೇಶ ಚಿತ್ರದಲ್ಲಿದೆ. ಅನುಮಾನ ಕುಟುಂಬವನ್ನು ಒಡೆಯುತ್ತದೆ, ಪರಸ್ಪರ ಹೊಂದಾಣಿಕೆ ಒಡೆದ ಸಂಬಂಧಗಳನ್ನು ಮತ್ತೆ ಬೆಸೆಯುತ್ತದೆ ಎಂಬ ಜೀವನಮೌಲ್ಯವನ್ನು ಚಿತ್ರ ಸಾರುತ್ತದೆ ಎಂದು ವಿವರಿಸಿದರು.

ಕನ್ನಡ ಚಿತ್ರರಂಗದಲ್ಲಿ ಇಂತಹ ಕೌಟುಂಬಿಕ ಹಾಗೂ ಸಾಮಾಜಿಕ ಸಂದೇಶವುಳ್ಳ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗಬೇಕು. ಪ್ರೇಕ್ಷಕರು ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ತೆರಳಿ ಕನ್ನಡ ಚಲನಚಿತ್ರಗಳನ್ನು ವೀಕ್ಷಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

ಪ್ರೀತಿ ಎಂದರೆ ಕೇವಲ ಪ್ರೇಮಿಗಳ ನಡುವಿನ ಸಂಬಂಧವಲ್ಲ. ತಂದೆಯ ವಾತ್ಸಲ್ಯ, ಕುಟುಂಬದ ಮೇಲಿನ ಕಾಳಜಿ, ಸ್ನೇಹಿತರ ವಿಶ್ವಾಸ ಹಾಗೂ ಪರಸ್ಪರ ಗೌರವವೂ ಪ್ರೀತಿಯ ವಿವಿಧ ರೂಪಗಳಾಗಿವೆ. ಈ ಎಲ್ಲ ಭಾವನೆಗಳನ್ನು ‘ಪ್ರೇಮದ ಊರಲಿ’ ಚಿತ್ರದಲ್ಲಿ ಮನೋಜ್ಞವಾಗಿ ನಿರೂಪಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ನಿರ್ದೇಶಕ ಮನೋಜ್ ಕುಮಾರ್ ಸೇರಿದಂತೆ ಎಲ್ಲ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಹಾಗೂ ಚಿತ್ರತಂಡದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ ಶ್ರೀದೇವಿ ರಾಜಶೇಖರ ನಾಯಕ, ಈ ಚಿತ್ರ ಇನ್ನಷ್ಟು ಪ್ರೇಕ್ಷಕರನ್ನು ತಲುಪಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.