ದೇವದುರ್ಗ, ಅ.6: ಧಮ್ಮ, ಸಮಾನತೆ ಹಾಗೂ ಸಾಮಾಜಿಕ ಜಾಗೃತಿಯ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ–2026’ಕ್ಕೆ ದೇವದುರ್ಗದಲ್ಲಿ ಚಾಲನೆ ನೀಡಲಾಯಿತು.

ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಯಾತ್ರೆಯ ಮೂಲಕ ಸಂವಿಧಾನದ ಆಶಯಗಳು, ಬುದ್ಧರ ಧಮ್ಮ ಸಂದೇಶ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ದೇವದುರ್ಗದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಮ್ಮ ಅನುಯಾಯಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಯಾತ್ರೆಗೆ ಶುಭಕೋರಿದರು. ಅಹಿಂಸೆ, ಸಮಾನತೆ, ಸಹೋದರತ್ವ ಮತ್ತು ಸಂವಿಧಾನ ಮೌಲ್ಯಗಳ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಬೇಕು ಎಂದು ಕರೆ ನೀಡಲಾಯಿತು.

‘ಧಮ್ಮದ ಬೆಳಕು ಮನೆಮನೆಗೂ–ಸಂವಿಧಾನದ ಮೌಲ್ಯ ಜನಮನಕ್ಕೂ’ ಎಂಬ ಆಶಯದೊಂದಿಗೆ ಯಾತ್ರೆ ಮುಂದುವರಿಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವನಾಥ್ ಬಲ್ಲಿದವ್, ಮೋಹನ್ ಬಲ್ಲಿದವ್, ಮಹಾಂತೇಶ್ ಭವಾನಿ, ರಂಗನಾಥ್ ಕೊಂಬಿನ್, ಗುಂಡಪ್ಪ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.