ಜಾಲಹಳ್ಳಿ: ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರೀಮಿಯರ್ ಲೀಗ್–2026 ಕ್ರಿಕೆಟ್ ಪಂದ್ಯಾವಳಿಗೆ ಭಾನುವಾರ ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸುವ ಹಾಗೂ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ ₹15 ಸಾವಿರ, ದ್ವಿತೀಯ ಬಹುಮಾನವಾಗಿ ₹10 ಸಾವಿರ ಹಾಗೂ ತೃತೀಯ ಬಹುಮಾನವಾಗಿ ₹5 ಸಾವಿರ ನಗದು ಬಹುಮಾನ ಘೋಷಿಸಲಾಗಿದೆ. ಪ್ರಥಮ ಬಹುಮಾನವನ್ನು ಶ್ರೀದೇವಿ ಆರ್. ನಾಯಕ್, ದ್ವಿತೀಯ ಬಹುಮಾನವನ್ನು ಭೂತಪ್ಪ ದೇವರಮನಿ ಹಾಗೂ ತೃತೀಯ ಬಹುಮಾನವನ್ನು ರಮೇಶ್ ಬಾವಿಮನಿ ಪ್ರಾಯೋಜಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಥಮ ಬಹುಮಾನ ಪ್ರಾಯೋಜಕರೂ ಆಗಿರುವ ರಾಷ್ಟ್ರೀಯ ಮಹಿಳಾ ಕಾರ್ಯದರ್ಶಿ ಶ್ರೀದೇವಿ ಆರ್. ನಾಯಕ್, ಯುವಜನರು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಯಾಗುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಮತ್ತು ಒಗ್ಗಟ್ಟಿನ ಮನೋಭಾವ ಬೆಳೆಯುತ್ತದೆ. ಗ್ರಾಮೀಣ ಭಾಗದ ಯುವಕರು ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿಕೊಂಡು ಉನ್ನತ ಮಟ್ಟದಲ್ಲಿ ಸಾಧನೆ ಮಾಡುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಭೂತಪ್ಪ ದೇವರಮನಿ ಮಾತನಾಡಿ, ಇಂತಹ ಕ್ರೀಡಾಕೂಟಗಳು ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದರ ಜೊತೆಗೆ ಪರಸ್ಪರ ಸ್ನೇಹ ಮತ್ತು ಸೌಹಾರ್ದತೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿ ಪಂದ್ಯಾವಳಿಗೆ ಶುಭ ಹಾರೈಸಿದರು.
ಭೀಮಣ್ಣ ವೀರಗೋಟ ಮಾತನಾಡಿ, ಯುವಕರು ಮೊಬೈಲ್ ಬಳಕೆಯಲ್ಲಿ ಹೆಚ್ಚಿನ ಸಮಯ ಕಳೆಯದೆ ಕ್ರೀಡೆ ಹಾಗೂ ಇತರ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಹಾಗೂ ಶಿಸ್ತಿನ ಜೀವನ ರೂಪಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಉತ್ತಮ ಕ್ರೀಡಾ ಮನೋಭಾವ ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ರಾಂಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮತಿ ರಾಂಪಳ್ಳಿ, ಶಿವರಾಜ್ ಪಾಣಿ ಜಾಲಹಳ್ಳಿ, ಸುರೇಶ್ ಚಿತ್ಲಕುಂಟಿ, ಬಾಳಪ್ಪ ಬಾವಿಮನಿ, ರಮೇಶ್ ಬಾವಿಮನಿ, ವೈದ್ಯಾಧಿಕಾರಿ ಹುಲಿಮನಿಗೌಡ, ಸಾಬಣ್ಣ ಗಾಣದಾಳ, ಬಸವರಾಜ್ ಮಂಡಲಗುಡ್ಡ, ಶಿವಪ್ಪ ಜಲ್ಲಿ, ಮೌನೇಶ್ ಗಾಣದಾಳ, ಚನ್ನಬಸವ ನಾಯಕ ಮ್ಯಾಕಲದೊಡ್ಡಿ, ಚನ್ನಪ್ಪ ಭವಾನಿ, ಚಂದಪ್ಪ ಬಾವಿಮನಿ, ಎಂ.ಆರ್. ಬಸವ, ತಿಮ್ಮಣ್ಣ ಬಂಕಲದೊಡ್ಡಿ, ತಿಮ್ಮಣ್ಣ ಮುರಾಳ, ಮೌನೇಶ್ ಜಲ್ಲಿ, ದುರ್ಗಪ್ಪ ಚಿಂಚೋಡಿ, ಬಸವರಾಜ್ ಚಿಂಚೋಡಿ ಸೇರಿದಂತೆ ಕ್ರೀಡಾಪಟುಗಳು, ಸಂಘಟಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.



