ತುರವಿಹಾಳ: ಪಟ್ಟಣದ ಶ್ರೀ ಸದ್ಗುರು ಸರ್ವೇಶ್ವರ ಮಠದ ವತಿಯಿಂದ ನೀಡಲಾಗುವ 2026ನೇ ಸಾಲಿನ ಪ್ರತಿಷ್ಠಿತ ಪರಮಶ್ರೀ ಪ್ರಶಸ್ತಿಗೆ ಪರಿಸರ ಪ್ರೇಮಿ, ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪುರಸ್ಕೃತ, ವನಸಿರಿ ಫೌಂಡೇಶನ್ ರಾಯಚೂರು ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರನ್ನು ಆಯ್ಕೆ ಮಾಡಲಾಗಿದೆ.

ಶ್ರೀಮಠದಲ್ಲಿ ಅಕ್ಟೋಬರ್ 25ರಂದು ಭಾನುವಾರ ನಡೆಯಲಿರುವ 177ನೇ ಜಾತ್ರಾ ಮಹೋತ್ಸವ ಹಾಗೂ 117ನೇ ವಚನ ಪ್ರವಚನ ಕಾರ್ಯಕ್ರಮದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪರಿಸರ ಸಂರಕ್ಷಣೆ, ಗಿಡಮರಗಳ ಪೋಷಣೆ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಅಮರೇಗೌಡ ಮಲ್ಲಾಪುರ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಶ್ರೀಮಠದ ವತಿಯಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶ್ರೀಮಠದ ಸದ್ಗುರು ಶ್ರೀ ಗುರು ಗುಂಡಯ್ಯ ಅಪ್ಪಯ್ಯನವರು, ಮಾತೋಶ್ರೀ ಶ್ರೀ ಈರಮ್ಮ ಅಮ್ಮನವರು ಹಾಗೂ ದಾಸೋಹ ಮೂರ್ತಿ ಶ್ರೀ ಗುರು ರಾಚಯ್ಯ ತಾತನವರ ಪುಣ್ಯಾರಾಧನೆಯ ಅಂಗವಾಗಿ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ವಚನ ಪ್ರವಚನ, ತುಲಾಭಾರ ಹಾಗೂ ‘ನಿಶ್ಯಬ್ದ ಬ್ರಹ್ಮ ವಚನ ಸಂಪುಟ’ ಪುಸ್ತಕ ಲೋಕಾರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮಕ್ಕೆ ಅಮರೇಗೌಡ ಮಲ್ಲಾಪುರ ಅವರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಲಾಗಿದ್ದು, ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪರಮಶ್ರೀ ಪ್ರಶಸ್ತಿ ನೀಡಿ ಗೌರವಿಸಲು ಶ್ರೀಮಠ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಶ್ರೀಮಠದ ಸದ್ಗುರು ಶ್ರೀ ಗುರು ಗುಂಡಯ್ಯ ಅಪ್ಪಯ್ಯನವರು ಹಾಗೂ ಭಕ್ತವೃಂದದವರು ಸಿಂಧನೂರಿನ ವನಸಿರಿ ಫೌಂಡೇಶನ್ ಕಾರ್ಯಾಲಯಕ್ಕೆ ಭೇಟಿ ನೀಡಿ, ಅಮರೇಗೌಡ ಮಲ್ಲಾಪುರ ಅವರಿಗೆ ವಿಶೇಷ ಆಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.

ಪರಿಸರ ಸಂರಕ್ಷಣೆಯೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಮರೇಗೌಡ ಮಲ್ಲಾಪುರ ಅವರಿಗೆ ಶ್ರೀಮಠದ ವತಿಯಿಂದ ಪ್ರಶಸ್ತಿ ಘೋಷಿಸಿರುವುದು ಅವರ ಸೇವೆಗೆ ದೊರೆತ ಗೌರವವಾಗಿದೆ.