ನಿಜವಾದ ಬೆಳವಣಿಗೆ ಎಂದರೆ ಇದು.... ಓರ್ವ ಬಸ್ ಡ್ರೈವರ್ ಮಗಳಾಗಿದ್ದ ಆಕೆ ಇದೀಗ ಜಗತ್ತಿನ ಅತ್ಯುಚ್ಚ ಗೌರವವಾದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ದಕ್ಷಿಣ ಆಫ್ರಿಕಾದ ನಿವಾಸಿಯಾಗಿರುವ ಆಕೆ ಮೂಲತಃ ಭಾರತ ದೇಶದ ಮೂಲದವರು. ನವನೇತಂ ಎಂಬುದು ಹಿರಿಯರು ಇಟ್ಟ ಹೆಸರಾದರೆ, ಸ್ನೇಹಿತರ ವಲಯದಲ್ಲಿ ಆಕೆ ನವೀ ಪಿಳ್ಳೆ ಎಂದೇ ಪರಿಚಿತರು. ಅವರ ಬದುಕಿನ ಪಯಣ ಅಸಾಧಾರಣವಾದದ್ದು.
ಸರಿಸುಮಾರು 85 ವರ್ಷ ವಯಸ್ಸಿನ ಅವರು ದಕ್ಷಿಣ ಆಫ್ರಿಕಾದ ಪ್ರಮುಖ ಹೋರಾಟಗಾರ್ತಿಯಾಗಿದ್ದು, ಸರಿಸುಮಾರು ಐದು ದಶಕಕ್ಕೂ ಹೆಚ್ಚು ಕಾಲ ಆಕೆ ಶಾಂತಿ, ಮಾನವೀಯ ಹಕ್ಕುಗಳು ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಕುರಿತು ಹೋರಾಟ ಮಾಡಿದ್ದರು. ಇದೀಗ ಆಕೆಯ ಹೋರಾಟದ ಪರಿಣಾಮಗಳ ಕಾರಣದಿಂದ ಆಕೆಗೆ ಜಗತ್ತಿನ ಅತ್ಯಂತ ಪ್ರತಿಷ್ಠಿತವಾದ 2026ರ ನೊಬೆಲ್ ಪ್ರಶಸ್ತಿಯು ದೊರೆತಿದೆ.
ನಾರ್ವೆಯ ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯು ಈ ಪ್ರಶಸ್ತಿಯನ್ನು ಅಕ್ಟೋಬರ್ ಒಂಬತ್ತರಂದು ಘೋಷಿಸಿದ್ದು, ಅಂತಾರಾಷ್ಟ್ರೀಯ ಕಾನೂನುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಯುದ್ಧದಲ್ಲಿ ತಲೆದೋರುವ ಕ್ರೌರ್ಯದ ವಿರುದ್ಧದ ಮಾನವೀಯ ಹೋರಾಟ ಹಾಗೂ ನರಬಲಿಯ ವಿರುದ್ಧದ ಹೋರಾಟ ಆಕೆಯದ್ದಾಗಿತ್ತು.
1941ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ ನಗರದಲ್ಲಿ ಹುಟ್ಟಿದ ನವನೇತಂ ತನ್ನ ಸ್ನೇಹಿತರ ವಲಯದಲ್ಲಿ ನವೀ ಎಂದೇ ಪರಿಚಿತರು. ಭಾರತೀಯ ತಮಿಳರ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಕುಟುಂಬದ ಕುಡಿ ಈ ನವೀ. ಕಬ್ಬಿನ ಗದ್ದೆಗಳಲ್ಲಿ ಕೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸಲು 1890ರಲ್ಲಿ ಭಾರತ ದೇಶದಿಂದ ದಕ್ಷಿಣ ಆಫ್ರಿಕಾಗೆ ವಲಸೆ ಹೋದ ಕುಟುಂಬದ ಮಗಳು ಆಕೆ. ಆಕೆಯ ತಂದೆ ಬಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಚಿಕ್ಕವಳಿದ್ದಾಗಿನಿಂದಲೂ ವರ್ಣಭೇದ ತೊಂದರೆಯನ್ನು ಅನುಭವಿಸಿದ ಆಕೆ ಅದರ ವಿರುದ್ಧ ಎದ್ದು ನಿಂತದ್ದು ಕೂಡ ಇದೇ ಕಾರಣಕ್ಕಾಗಿಯೇ. ಎಲ್ಲಾ ಅಡೆತಡೆಗಳ ನಡುವೆಯೂ ನವೀ ಪಿಳ್ಳೆ ಅವರು 1967ರಲ್ಲಿ ಕಾನೂನು ಪದವಿಯನ್ನು ಪಡೆದು ದಕ್ಷಿಣ ಆಫ್ರಿಕಾದ ನಟಾಲ್ ಎಂಬ ಪ್ರಾಂತ್ಯದಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಮೊದಲ ಬಿಳಿಯೇತರ ಮಹಿಳೆಯಾಗಿ ಗುರುತಿಸಿಕೊಂಡರು.
1981ರಲ್ಲಿ ಆಕೆ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಕಾನೂನು ಪದವಿ ಪಡೆದರು. ಮುಂದೆ ಕಾನೂನು ವಿಜ್ಞಾನದಲ್ಲಿ ಆಕೆ ಪಿಎಚ್ಡಿ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪಡೆದುಕೊಂಡರು.
ರಾಜಕೀಯ ಕೈದಿಗಳ ಹಕ್ಕುಗಳು ಹಾಗೂ ವರ್ಣಭೇದ ನೀತಿಯ ವಿರುದ್ಧ ಆಕೆ ಹೋರಾಡಿದರು.... ವರ್ಣಭೇದ ನೀತಿಯ ವಿರುದ್ಧದ ಹೋರಾಟದ ಕಾರ್ಯಕರ್ತೆಯಾಗಿಯೂ ಆಕೆ ತಮ್ಮನ್ನು ತಾವು ಗುರುತಿಸಿಕೊಂಡರು. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾರಂತಹ ಘಟಾನುಘಟಿಗಳಿಗೆ ಅವರು ಕಾನೂನು ಹೋರಾಟಗಾರರಾಗಿ ಕಾರ್ಯನಿರ್ವಹಿಸಿದರು.
ಮುಂದೆ ನವೀ ಪಿಳ್ಳೆ ಅವರು ದಕ್ಷಿಣ ಆಫ್ರಿಕಾದ ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಮೊದಲ ಕರಿಯ ಮಹಿಳೆಯಾಗಿ ಗುರುತಿಸಿಕೊಂಡರು.
ಉಚ್ಚ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವಾಗಲೇ ಜಾಗತಿಕವಾಗಿ ಅತ್ಯಂತ ಪ್ರಸಿದ್ಧವಾಗಿದ್ದ ಕಾನೂನು ಸಂಸ್ಥೆಗಳೊಂದಿಗೆ ಆಕೆ ಕಾನೂನು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಯಿತು.
ಮುಂದೆ ಆಕೆ ರುವಾಂಡಾದಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶೆ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಲೈಂಗಿಕ ಹಿಂಸೆಗೆ ಸಂಬಂಧಿಸಿದ ಹಾಗೂ ನರಮೇಧಕ್ಕೆ ಸಂಬಂಧಿಸಿದ ಪ್ರಮುಖವಾದ ಕಾನೂನುಗಳನ್ನು ರೂಪಿಸಲು ತಮ್ಮದೇ ಆದ ಕಾಣಿಕೆಯನ್ನು ನೀಡಿದರು.
ಮುಂದೆ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಆಗಿ 2008ರಿಂದ 2014ರವರೆಗೆ ಕಾರ್ಯನಿರ್ವಹಿಸಿದರು.
ಆಕ್ರಮಣಕಾರರಿಂದ ವಶಪಡಿಸಿಕೊಳ್ಳಲ್ಪಟ್ಟಿರುವ ಪ್ಯಾಲಸ್ತೀನ್ ವಲಯದಲ್ಲಿ ಅಂತಾರಾಷ್ಟ್ರೀಯ ಕಾನೂನುಗಳು ಮಾನ್ಯತೆಯನ್ನು ಹೊಂದಿವೆ. ಆದರೆ ಅಲ್ಲಿ ಗಾಜಾ ಪಟ್ಟಿ ಎಂಬ ಸ್ಥಳದಲ್ಲಿ ನರಮೇಧವನ್ನು ನಡೆಸಿರುವ ಕುರಿತು ವರದಿಗಳು ಪ್ರಕಟವಾಗಿವೆ. ಈ ವರದಿಯನ್ನು ಇಸ್ರೇಲಿ ಸರ್ಕಾರವು ಅತ್ಯಂತ ಕಟುವಾಗಿ ವಿರೋಧಿಸಿದೆ.
ಆದರೆ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸ್ವತಃ ನ್ಯಾಯಾಧೀಶರಾಗಿರುವ ನವೀ ಪಿಳ್ಳೆ ಅವರು ಇಸ್ರೇಲ್ನ ಗಾಜಾ ಪಟ್ಟಿಯಲ್ಲಿ ನಡೆದಿರಬಹುದಾದ ನರಮೇಧದ ಕುರಿತು ವರದಿ ಒಪ್ಪಿಸಲು ಸರ್ಕಾರಕ್ಕೆ ಹೇಳಿದ್ದಾರೆ. ನರಮೇಧಕ್ಕೆ ವಿರುದ್ಧವಾಗಿ ಅವರು ಸಲ್ಲಿಸಿರುವ ಅರ್ಜಿಯು ಸರ್ಕಾರಿ ವಲಯದಲ್ಲಿ ಪುರಸ್ಕೃತಗೊಂಡಿದೆ.
ಇದೀಗ ನಾರ್ವೆ ದೇಶದ ನೊಬೆಲ್ ಸಂಸ್ಥೆಯು ಆಕೆ ಜೀವಮಾನಪೂರ್ತಿ ಸಲ್ಲಿಸಿರುವ ಅದ್ಭುತವಾದ ಕಾನೂನು ಸಮರವನ್ನು ಹಾಗೂ ಹೋರಾಟವನ್ನು ಪರಿಗಣಿಸಿ ಆಕೆಯನ್ನು ವೈಯಕ್ತಿಕವಾಗಿ ಅತ್ಯಂತ ಶಕ್ತಿಶಾಲಿ ಹಾಗೂ ಸ್ವತಂತ್ರ ವಿಚಾರಧಾರೆಗಳನ್ನು ಹೊಂದಿರುವ ವ್ಯಕ್ತಿ ಎಂದು ಹೊಗಳಿದೆ.
ಇದೀಗ ನವೀ ಪಿಳ್ಳೆ ಅವರು ದಕ್ಷಿಣ ಆಫ್ರಿಕಾದ ಐದನೇ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ನೆಲ್ಸನ್ ಮಂಡೇಲಾ, ಡೆಸ್ಮಂಡ್ ಟುಟು, ಆಲ್ಬರ್ಟ್ ಲುಥುಲಿ ಹಾಗೂ ಎಫ್.ಡಬ್ಲ್ಯೂ. ಡಿ ಕ್ಲರ್ಕ್ ಮುಂತಾದ ದಿಗ್ಗಜರ ಸಾಲಿನಲ್ಲಿ ಇದೀಗ ನವೀ ಪಿಳ್ಳೆ ಅವರು ಐದನೆಯವರಾಗಿ ನೊಬೆಲ್ ಶಾಂತಿ ಪುರಸ್ಕಾರವನ್ನು ಪಡೆದಿದ್ದಾರೆ.
ಈ ಪುರಸ್ಕಾರವು 1.2 ಮಿಲಿಯನ್ ಡಾಲರ್ ಮೊತ್ತದ ಬಹುದೊಡ್ಡ ಪ್ರಶಸ್ತಿಯಾಗಿದ್ದು, ಇದು ಸ್ವೀಡನ್ನಿನ 1.2 ಮಿಲಿಯನ್ ಕ್ರೌನ್ ಮೊತ್ತಕ್ಕೆ ಸಮನಾಗಿದೆ. ಈ ಪುರಸ್ಕಾರವನ್ನು ಡಿಸೆಂಬರ್ 10, 2026ರಂದು ಓಸ್ಲೋದಲ್ಲಿ ನೀಡಲಾಗುತ್ತದೆ.
ಒಂದೊಮ್ಮೆ ಕೂಲಿ ಕಾರ್ಮಿಕರಾಗಿ ಆಕೆಯ ಅಜ್ಜ-ಅಜ್ಜಿ ದಕ್ಷಿಣ ಆಫ್ರಿಕಾದಲ್ಲಿ ನೆಲೆಯೂರಲು ಪ್ರಯತ್ನಿಸಿದರು.... ಇದೀಗ ಅವರ ಮೊಮ್ಮಗಳು ತನ್ನ ಶೈಕ್ಷಣಿಕ ಹಿನ್ನೆಲೆಯನ್ನು ಬಳಸಿಕೊಂಡು ಮಾನವೀಯ ಹಕ್ಕುಗಳಿಗಾಗಿ ಹೋರಾಟ ಮಾಡಿ ಅಂತಾರಾಷ್ಟ್ರೀಯ ಕಾನೂನುಗಳನ್ನು ರೂಪಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದರು.... ಪರಿಣಾಮವಾಗಿ ನೊಬೆಲ್ ಶಾಂತಿ ಪ್ರಶಸ್ತಿಯು ಅವರ ಮಡಿಲನ್ನು ಸೇರಲಿದೆ.
ನವೀ ಪಿಳ್ಳೆ ಅವರಂಥವರ ಸಂತತಿ ಸಾವಿರವಾಗಲಿ.... ಅವರಿಗೆ ಇನ್ನಷ್ಟು ಪ್ರಶಸ್ತಿ, ಗೌರವಗಳು ಲಭಿಸಲಿ ಎಂಬ ಆಶಯದೊಂದಿಗೆ
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ



