ನಿಲೋಗಲ್: ಸಪ್ತ ಗ್ರಾಮಗಳ ಅಧಿದೇವತೆಯಾದ ಸುಕ್ಷೇತ್ರ ನಿಲೋಗಲ್ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಮೂರನೇ ವರ್ಷದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನದ ಮಹಾಮಂಗಳ ಕಾರ್ಯಕ್ರಮ ಅಕ್ಟೋಬರ್ 21ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.
ನಿಲೋಗಲ್, ಗೆಜ್ಜಲಗಟ್ಟಾ, ಚಿಕ್ಕನಗನೂರು, ವೀರಾಪುರ, ಚುಕನಟ್ಟಿ, ಹಿರೇನಗನೂರು ಹಾಗೂ ಹಟ್ಟಿ ಗ್ರಾಮಗಳ ಭಕ್ತರ ಸಹಕಾರದೊಂದಿಗೆ ನಡೆಯುತ್ತಿರುವ ಪುರಾಣ ಕಾರ್ಯಕ್ರಮವು ಲಿಂಗಸುಗೂರಿನ ಮಾತಾ ಮಾಣಿಕೇಶ್ವರಿ ಆಶ್ರಮದ ಪರಮಪೂಜ್ಯ ಯೋಗಿನಿ ಮಾತೋಶ್ರೀ ಡಾ. ನಂದೀಶ್ವರಿ ಅಮ್ಮನವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.
ದೇವರ ಭೂಪುರದ ಬೃಹನ್ಮಠದ ಷ.ಬ್ರ. ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳು, ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮಿಗಳು, ಅಂಕಲಿಮಠದ ವೀರಭದ್ರೇಶ್ವರ ಮಹಾಸ್ವಾಮಿಗಳು, ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು, ಮುಂಡರಗಿಯ ಸದಾಶಿವ ತಾತನವರು, ಶಿವಪ್ರಸಾದ ತಾತನವರು ಹಾಗೂ ಹುಲಿಜಂತಿಯ ಮಾಳಿಂಗರಾಯ ತಾತನವರ ದಿವ್ಯ ಸಾನ್ನಿಧ್ಯದಲ್ಲಿ ಮಹಾಮಂಗಳ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 11ರಿಂದ ಪ್ರತಿದಿನ ಸಂಜೆ 6ರಿಂದ ರಾತ್ರಿ 8 ಗಂಟೆಯವರೆಗೆ ಶ್ರೀ ಚಿದಾನಂದ ಅವಧೂತರು ವಿರಚಿತ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ನಡೆಯುತ್ತಿದ್ದು, ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ದುರ್ಗಾ ಪರಮೇಶ್ವರಿ ಆರಾಧಕ, ಕಡಣಿ ಹಿರೇಮಠದ ಪೂಜ್ಯ ಚನ್ನವೀರ ಸ್ವಾಮಿಗಳು ಪ್ರವಚನ ನೀಡುತ್ತಿದ್ದಾರೆ. ಪ್ರವಚನಕ್ಕೆ ಸಿದ್ಧಲಿಂಗಯ್ಯ ಹಿರೇಮಠ ಕಡಕೋಳ ಹಾಗೂ ರವಿ ಹಾದಿಮನಿ ಬೆನಕನಾಳ ಸಂಗೀತ ಸೇವೆ ಸಲ್ಲಿಸುತ್ತಿದ್ದಾರೆ.
ಅಕ್ಟೋಬರ್ 21ರಂದು ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ದುರ್ಗಾದೇವಿಯ ಭಾವಚಿತ್ರದ ಪಲ್ಲಕ್ಕಿ ಉತ್ಸವ, ಕುಂಭ ಹಾಗೂ ಕಳಸ-ಕನ್ನಡಿ ಮೆರವಣಿಗೆ ಭಕ್ತಿಭಾವದಿಂದ ನಡೆಯಲಿದೆ. ಮೆರವಣಿಗೆಯ ನಂತರ ಶ್ರೀದೇವಿ ಪುರಾಣದ ಮಹಾಮಂಗಳ ಕಾರ್ಯಕ್ರಮ ನೆರವೇರಲಿದೆ.
ಇದೇ ಸಂದರ್ಭದಲ್ಲಿ ಪುರಾಣ ಪ್ರವಚನಕಾರರು ಹಾಗೂ ಸಂಗೀತ ಸೇವೆ ಸಲ್ಲಿಸಿದ ಕಲಾವಿದರನ್ನು ಸನ್ಮಾನಿಸಲಾಗುವುದು. ಪುರಾಣ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ದಾನಿಗಳನ್ನು ಗೌರವಿಸಿ 'ದುರ್ಗಾ ರಕ್ಷೆ' ನೀಡಿ ಸತ್ಕರಿಸಲಾಗುವುದು.
ಮಹಾಮಂಗಳದ ಬಳಿಕ ಸಾರ್ವಜನಿಕರಿಗೆ ಸಾಮೂಹಿಕ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ನಿಲೋಗಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದುರ್ಗಾದೇವಿಯ ದರ್ಶನ ಪಡೆದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಬೇಕೆಂದು ಪುರಾಣ ಸೇವಾ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.



