ಮಾನ್ವಿ: ಪಟ್ಟಣದ ಶ್ರೀ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಶ್ರೀ ಜಗನ್ನಾಥದಾಸರ ಸನ್ನಿಧಾನದಲ್ಲಿ ಶ್ರೀ ಜಗನ್ನಾಥದಾಸರ 217ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ನೆರವೇರಿತು.

ಆರಾಧನೆಯ ಅಂಗವಾಗಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುಪ್ರಭಾತದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದ್ದು, ದಾಸಾರ್ಯ ಮಹಿಳಾ ಭಜನಾ ಮಂಡಳಿಯವರಿಂದ ಹರಿಕಥಾಮೃತಸಾರದ ಸಂಪೂರ್ಣ ಪಾರಾಯಣ ನಡೆಯಿತು. ಬಳಿಕ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಹಸ್ತೋದಕ ಹಾಗೂ ತೀರ್ಥಪ್ರಸಾದ ಕಾರ್ಯಕ್ರಮಗಳು ಜರುಗಿದವು.

ಶ್ರೀ ಜಗನ್ನಾಥದಾಸರ ಮೂಲ ಅರ್ಚಕ ವಂಶಸ್ಥರಾದ ನಮೃತ ಆಚಾರ್ಯ, ವ್ಯವಸ್ಥಾಪಕ ಶ್ರೀನಿವಾಸರಾವ್ ಕೊರ್ಲಹಳ್ಳಿ ಹಾಗೂ ಅರ್ಚಕ ಪ್ರಲ್ಹಾದಾಚಾರ್ಯ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಉತ್ತರಾರಾಧನೆಯ ವಿಶೇಷ ಆಕರ್ಷಣೆಯಾಗಿ ಬೆಳ್ಳಿ ರಥ ಹಾಗೂ ಕಟ್ಟಿಗೆಯ ರಥವನ್ನು ಹೂವಿನಿಂದ ಅಲಂಕರಿಸಿ, ಶ್ರೀ ಜಗನ್ನಾಥದಾಸರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನದ ಆವರಣದಲ್ಲಿ ಜೋಡಿ ರಥೋತ್ಸವವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆದರು.

ರಥೋತ್ಸವದ ವೇಳೆ ಭಕ್ತರು ಪರಸ್ಪರ ಗುಲಾಲ್ ಎರಚಿ ಸಂಭ್ರಮಿಸಿದರು. ವಿವಿಧ ಭಜನಾ ಮಂಡಳಿಗಳ ಸದಸ್ಯರು ಭಕ್ತಿಗೀತೆಗಳು ಹಾಗೂ ದಾಸರ ಪದಗಳನ್ನು ಹಾಡುವ ಮೂಲಕ ಭಕ್ತಿಮಯ ವಾತಾವರಣ ನಿರ್ಮಿಸಿದರು. ತೀರ್ಥಪ್ರಸಾದ ಸ್ವೀಕರಿಸಿದ ಭಕ್ತರು ಶ್ರೀ ಜಗನ್ನಾಥದಾಸರ ಕೃಪೆಗೆ ಪಾತ್ರರಾಗಲಿ ಎಂದು ಪ್ರಾರ್ಥಿಸಿದರು.