ಮಾನ್ವಿ: ಪಟ್ಟಣದ ಜುಮ್ಮಲದೊಡ್ಡಿಯ ಹಜರತ್ ಸೈಯದ್ ಷಾ ಮುರ್ತುಜಾ ಖಾದ್ರಿ ಅವರ ಬಡೇಸಾಹೇಬ್ ದರ್ಗಾದ ಉರ್ಸ್-ಎ-ಶರೀಫ್ ಕಾರ್ಯಕ್ರಮವು ಸೆ.24ರಿಂದ 26ರವರೆಗೆ ನಡೆಯಲಿದೆ ಎಂದು ಮುಸ್ಲಿಂ ಧರ್ಮಗುರು ಸೈಯದ್ ಸಜ್ಜದ್ ಹುಸೇನಿ ಮುತ್ವಲ್ಲಿ ಸಾಹೇಬ್ ತಿಳಿಸಿದರು.

ಪಟ್ಟಣದ ಜುಮ್ಮಲದೊಡ್ಡಿಯ ಬಡೇಸಾಹೇಬ್ ದರ್ಗಾ ಆವರಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.24ರಂದು ಗುರುವಾರ ರಾತ್ರಿ 8.30ಕ್ಕೆ ಬಡೇಸಾಹೇಬ್ ದರ್ಗಾದಿಂದ ಜಾಮಿಯಾ ಮಸೀದಿವರೆಗೆ ಸಂದಲ್ ಹಾಗೂ ಗಂಧದ ಮೆರವಣಿಗೆ ನಡೆಯಲಿದ್ದು, ಬಳಿಕ ಸಂದಲ್ ಅನ್ನು ಮರಳಿ ದರ್ಗಾಕ್ಕೆ ತರಲಾಗುವುದು ಎಂದು ತಿಳಿಸಿದರು.

ಗೌಸಿಯಾ ಪಾಕ್ ಅವರ ಗ್ಯಾರವಿ ಶರೀಫ್ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಗುವುದು. ಉರ್ಸ್‌ಗೆ ಆಗಮಿಸುವ ಸರ್ವಧರ್ಮದ ಭಕ್ತರಿಗೆ ಲಂಗರ್ ಮೂಲಕ ಅನ್ನದಾಸೋಹ ವ್ಯವಸ್ಥೆ ಮಾಡಲಾಗುವುದು. ಸೆ.25ರಂದು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಉರ್ಸ್ ಕಾರ್ಯಕ್ರಮ ಹಾಗೂ ಸೆ.26ರಂದು ಶನಿವಾರ ಸಂಜೆ 5ಕ್ಕೆ ಝಿಯಾರತ್ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಉರ್ಸ್-ಎ-ಶರೀಫ್‌ನಲ್ಲಿ ಚಿಕ್ಕಮಗಳೂರಿನ ದಾದಾ ಹಯಾತ್ ಖಲಂದರ್ ದರ್ಗಾದ ಸೈಯದ್ ಗೌಸ್ ಮೈನುದ್ದೀನ್ ಖಾದ್ರಿ, ಆದೋನಿಯ ಸೈಯದ್ ತಲಾಹ್ ಖಾದ್ರಿ, ರಾಯಚೂರು ಹೊಸೂರು ದರ್ಗಾದ ಸಜ್ಜಾದ್ ಸೈಯದ್ ಕರೀಮುಲ್ಲಾ ಖಾದ್ರಿ, ಸೈಯದ್ ನಬೀ ಮುಹಿದ್ದೀನ್ ಖಾದ್ರಿ, ಕೌತಾಳಂ ದರ್ಗಾದ ಸೈಯದ್ ಜೈನುಲ್ ಬದೀನ್ ಸೇರಿದಂತೆ ಜಂತಕಲ್, ಕಂಪ್ಲಿ, ಗಂಗಾವತಿ, ಸಿಂಧನೂರು, ಮಾನ್ವಿ ಹಾಗೂ ರಾಯಚೂರಿನ ವಿವಿಧ ದರ್ಗಾಗಳ ಧರ್ಮಗುರುಗಳು, ಉಲೇಮಾಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸೈಯದ್ ಸಜ್ಜದ್ ಹುಸೇನಿ ಮುತ್ವಲ್ಲಿ ಸಾಹೇಬ್ ಸೇರಿದಂತೆ ಮುಸ್ಲಿಂ ಸಮುದಾಯದವರು ದರ್ಗಾದಲ್ಲಿ ಉತ್ತಮ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಹಜರತ್ ಸೈಯದ್ ಷಾ ಇರ್ಫಾನ್ ಖಾದ್ರಿ ಸಾಹೇಬ್ ದರ್ಗಾ ಸಜ್ಜಾದ್ ನಶೀನ್, ಸೈಯದ್ ಅಬೀದ್ ಖಾದ್ರಿ ಸಾಹೇಬ್ ದರ್ಗಾ ಮುತ್ವಲ್ಲಿ ಗುರುಜಿ, ಸೈಯದ್ ರಿಯಾಜುದ್ದೀನ್ ಖಾದ್ರಿ ಸಾಹೇಬ್, ಸೈಯದ್ ಇಮ್ರಾನ್ ಖಾದ್ರಿ ಸಾಹೇಬ್, ಸೈಯದ್ ನುಸರತ್ ಖಾದ್ರಿ ಸಾಹೇಬ್, ಜನಾಬ್ ನಾಸೀರ್ ಖಾಜಿ ಸಾಹೇಬ್, ಸೈಯದ್ ನಜೀರುದ್ದೀನ್ ಖಾದ್ರಿ ಸಾಹೇಬ್, ಇಬ್ರಾಹಿಂ ಕುರೇಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.