ಮಾನ್ವಿ: ಚಾಮರಾಜನಗರ ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 24 ಮತ್ತು 25ರಂದು ಎರಡು ದಿನಗಳ ಕಾಲ ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ನಡೆಯಲಿದ್ದು, ತಾಲೂಕಿನ ಬೌದ್ಧ ಧರ್ಮದ ಅನುಯಾಯಿಗಳು, ಅಂಬೇಡ್ಕರ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಕೀಲ ತಿಪ್ಪಣ್ಣ ಬಾಗಲವಾಡ ಕರೆ ನೀಡಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂಜ್ಯ ಮನೋರಕ್ಖಿತ ಭಂತೇಜಿ, ಶಾಸಕ ಎ.ಆರ್. ಕೃಷ್ಣಮೂರ್ತಿ, ಸಂಸದ ಸುನೀಲ್ ಬೋಸ್ ಹಾಗೂ ದೇಶ-ವಿದೇಶಗಳ ಬೌದ್ಧ ಭಿಕ್ಕುಗಳ ನೇತೃತ್ವದಲ್ಲಿ ಮಹಾಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಎರಡು ದಿನಗಳ ಸಮ್ಮೇಳನದಲ್ಲಿ ಹಿರಿಯ ಸಾಹಿತಿಗಳು, ಬೌದ್ಧ ಭಿಕ್ಕುಗಳು, ಚಿಂತಕರು ಹಾಗೂ ವಿವಿಧ ಕ್ಷೇತ್ರಗಳ ಉಪನ್ಯಾಸಕರು ಭಾಗವಹಿಸಿ ಬೌದ್ಧ ಧರ್ಮದ ತತ್ವಗಳು, ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ವಿಶ್ವಶಾಂತಿಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಇದರೊಂದಿಗೆ ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ ಎಂದು ವಿವರಿಸಿದರು.

ಪ್ರಸ್ತುತ ಜಗತ್ತಿನಲ್ಲಿ ಯುದ್ಧ, ಸಂಘರ್ಷ ಹಾಗೂ ಅಶಾಂತಿಯ ವಾತಾವರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಗೌತಮ ಬುದ್ಧರ ಶಾಂತಿ ಸಂದೇಶಕ್ಕೆ ಹೆಚ್ಚಿನ ಮಹತ್ವವಿದೆ. ‘ಯುದ್ಧ ಬೇಡ, ಬುದ್ಧ ಬೇಕು’ ಎಂಬ ಸಂದೇಶವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಗೌತಮ ಬುದ್ಧರು ಬೋಧಿಸಿದ ಪ್ರೀತಿ, ಕರುಣೆ, ತ್ಯಾಗ, ಮಮತೆ, ಸಮಾನತೆ ಹಾಗೂ ಸಹಬಾಳ್ವೆಯ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ. ಜಾತಿ, ಧರ್ಮ ಮತ್ತು ವರ್ಗಭೇದಗಳನ್ನು ಮೀರಿ ಮಾನವೀಯತೆಯ ಆಧಾರದ ಮೇಲೆ ಬದುಕು ಕಟ್ಟಿಕೊಳ್ಳಲು ಬೌದ್ಧ ಚಿಂತನೆಗಳು ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಆಶಯಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ದೃಷ್ಟಿಯಿಂದಲೂ ಈ ಮಹಾಸಮ್ಮೇಳನ ಮಹತ್ವದ್ದಾಗಿದೆ. ವಿಶೇಷವಾಗಿ ಯುವಜನರು ಇಂತಹ ವಿಚಾರಪೂರ್ಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬುದ್ಧ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಂತರರಾಷ್ಟ್ರೀಯ ಮಟ್ಟದ ಬೌದ್ಧ ಭಿಕ್ಕುಗಳು ಹಾಗೂ ಚಿಂತಕರು ಒಂದೇ ವೇದಿಕೆಯಲ್ಲಿ ಭಾಗವಹಿಸುತ್ತಿರುವುದರಿಂದ ಬೌದ್ಧ ಧರ್ಮದ ಇತಿಹಾಸ, ತತ್ವಜ್ಞಾನ ಮತ್ತು ಸಾಮಾಜಿಕ ಸಂದೇಶಗಳ ಕುರಿತು ತಿಳಿದುಕೊಳ್ಳಲು ಉತ್ತಮ ಅವಕಾಶ ದೊರೆಯಲಿದೆ. ಆದ್ದರಿಂದ ಮಾನ್ವಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ನರಸಪ್ಪ ಜೂಕೂರು, ಲಕ್ಷ್ಮಣ ಜಾನೇಕಲ್, ಹನುಮಂತ ಉದ್ಬಾಳ್, ಹನುಮಂತ ಸೀಕಲ್, ಹನುಮಂತ್ರಾಯ ಕಪಗಲ್, ಮೌನೇಶ ಕೋರಿ, ವಕೀಲರಾದ ದತ್ತಾತ್ರೇಯ ಮತ್ತು ಶ್ರೀನಿವಾಸ, ಜಗದೀಶ, ಅಮರೇಶ ನಂದಿಹಾಳ, ಶಂಕರ ಜಾನೇಕಲ್, ನಾಗರೆಡ್ಡಿ ಸೀಕಲ್, ಬಸವರಾಜ, ನರಸಿಂಹ ಗೋರ್ಕಲ್, ಮಲ್ಲಿಕಾರ್ಜುನ, ನರಸಿಂಹ ಹಾಗೂ ಸುರೇಶ ಬೈಲ್ ಮಾರ್ಚೆಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.