ಸಿಂಧನೂರು: ಭೂಮಿ, ಮನೆ, ನಿವೇಶನ, ಉದ್ಯೋಗ ಖಾತ್ರಿ, ಕುಡಿಯುವ ನೀರು, ಬರ ಪರಿಹಾರ ಹಾಗೂ ವಿದ್ಯುತ್ ಸಮಸ್ಯೆ ಸೇರಿದಂತೆ ರೈತರು ಮತ್ತು ಕೃಷಿ ಕೂಲಿಕಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 24ರಿಂದ ಜಿಲ್ಲೆಯ ವಿವಿಧ ತಾಲೂಕುಗಳ ಮೂಲಕ ಪಾದಯಾತ್ರೆ ನಡೆಸಿ, ಅಕ್ಟೋಬರ್ 27ರಂದು ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಸವಂತರಾಯಗೌಡ ಕಲ್ಲೂರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರೈತರು ಹಾಗೂ ಕೂಲಿಕಾರರ ಬದುಕಿಗೆ ಸಂಬಂಧಿಸಿದ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಅಕ್ಟೋಬರ್ 24ರಂದು ಸಿಂಧನೂರಿನಿಂದ ಆರಂಭವಾಗುವ ಪಾದಯಾತ್ರೆಯು ಉದ್ಬಾಳ, ಗೋಮರ್ಸಿ, ಮಾಡಶಿರವಾರ, ಬೆಳಗುರ್ಕಿ, ಅಲಬನೂರು, ಬಾದರ್ಲಿ, ಹರೆಟನೂರು, ಗಿಣಿವಾರ, ಒಳಬಳ್ಳಾರಿ, ಹೆಡಗಿನಾಳ, ಪುಲಮೇಶ್ವರದಿನ್ನಿ, ಚಿತ್ರಾಲಿ, ಚಿಂತಮಾನದೊಡ್ಡಿ, ಆಯನೂರು, ಹುಲಗುಂಚಿ, ಗೊನ್ವಾರ, ಪುಲದಿನ್ನಿ, ರಾಗಲಪರ್ವಿ, ವಲ್ಕಂದಿನ್ನಿ, ಯಾಪಲಪರ್ವಿ ಹಾಗೂ ಪೊತ್ನಾಳ ಮಾರ್ಗವಾಗಿ ಏಳು ಮೈಲ್ ಕ್ರಾಸ್ ತಲುಪಲಿದೆ ಎಂದು ವಿವರಿಸಿದರು.

ಗ್ರಾಮೀಣ ಪ್ರದೇಶದ ಭೂರಹಿತರಿಗೆ ಭೂಮಿ, ವಸತಿರಹಿತರಿಗೆ ಮನೆ ಹಾಗೂ ನಿವೇಶನ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ನೀಡಬೇಕು. ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಅಕ್ಟೋಬರ್ 27ರಂದು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಲಿರುವ ಧರಣಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ರೈತರು, ಕೃಷಿ ಕೂಲಿಕಾರರು, ಗ್ರಾಮೀಣ ಕಾರ್ಮಿಕರು ಹಾಗೂ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶರಣಪ್ಪ ಚಿರತನಾಳ, ಶಂಕ್ರಪ್ಪ ಕೆಂಗಲ್, ಆದನಗೌಡ ಹಾಗೂ ಹುಸೇನಪ್ಪ ದಡೆಸ್ಗೂರು ಉಪಸ್ಥಿತರಿದ್ದರು.