ಲಿಂಗಸುಗೂರು: ಪಟ್ಟಣದ ಪುರಸಭೆಯ 18ನೇ ವಾರ್ಡ್ ವ್ಯಾಪ್ತಿಯ ಹುಲಿಗುಡ್ಡದಲ್ಲಿ 24ನೇ ವರ್ಷದ ಶ್ರೀ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಜರುಗಿತು. ಹುಣಕುಂಟಿಯ ಶರಣಯ್ಯ ತಾತನವರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಪ್ರತಿವರ್ಷದಂತೆ ಈ ಬಾರಿಯೂ ಶ್ರೀ ಗದ್ದೆಮ್ಮದೇವಿ ಜಾತ್ರೆಯನ್ನು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಜಾತ್ರೆಯ ಅಂಗವಾಗಿ 101 ಕುಂಭಗಳ ಭವ್ಯ ಮೆರವಣಿಗೆ ನಡೆಯಿತು. ಸಾಂಪ್ರದಾಯಿಕ ವಾದ್ಯಮೇಳಗಳೊಂದಿಗೆ ಭಕ್ತರು ಗಂಗಾಸ್ಥಳಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಕಳಸಾರೋಹಣ ನೆರವೇರಿಸಿದರು.
ಕುಂಭಮೇಳದ ಮೆರವಣಿಗೆಯಲ್ಲಿ ಮಹಿಳೆಯರು ಹಾಗೂ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ವಾದ್ಯಗಳ ನಾದದೊಂದಿಗೆ ನಡೆದ ಮೆರವಣಿಗೆಯು ಹುಲಿಗುಡ್ಡದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು. ಗದ್ದೆಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಕುಟುಂಬದ ಸುಖಶಾಂತಿ ಹಾಗೂ ಗ್ರಾಮಸ್ಥರ ಒಳಿತಿಗಾಗಿ ಪ್ರಾರ್ಥಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆ ಜಾನಪದ ಹಾಸ್ಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಲಾವಿದರ ಹಾಸ್ಯ ಪ್ರದರ್ಶನವು ನೆರೆದಿದ್ದ ಸಾರ್ವಜನಿಕರಿಗೆ ಮನರಂಜನೆ ನೀಡಿತು. ಧಾರ್ಮಿಕ ಆಚರಣೆಗಳ ಜೊತೆಗೆ ಜಾನಪದ ಕಲೆಗೆ ಅವಕಾಶ ಕಲ್ಪಿಸಿರುವುದು ಜಾತ್ರೆಯ ವಿಶೇಷತೆಯಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಗದ್ದೆಮ್ಮದೇವಿ ಟ್ರಸ್ಟ್ ಅಧ್ಯಕ್ಷ ಚನ್ನಾರೆಡ್ಡಿ ಬಿರಾದಾರ, ಸಿದ್ದಪ್ಪ ಚೆನ್ನೂರ್ಕರ್, ಯಲ್ಲನಗೌಡ ಪಾಟೀಲ್, ಕರಸ್ಥಳಪ್ಪ ಬಡಿಗೇರ, ಮುತ್ತಣ್ಣ ಅಲ್ವಿ, ನಾಗರಾಜ ತಿಪ್ಪಣ್ಣ, ಕುಪ್ಪಣ್ಣ, ಕಾಳಪ್ಪ ಬಡಿಗೇರ, ನಿರುಪಾದಿ ಹಿರೇಮಠ, ರಂಗಪ್ಪ ಭೋವಿ, ನಾಗರಾಜ ಹಗರಗುಂಡ, ಅಮರೇಶ, ಲಕ್ಷ್ಮೀದೇವಿ ಪಾಟೀಲ್, ಸಾವಿತ್ರಿ ಚೆನ್ನೂರ್ಕರ್, ದೇವಮ್ಮ ಬಡಿಗೇರ, ರೇಣುಕಾ ಪಾಟೀಲ್, ಅಯ್ಯಮ್ಮ ಪಾಟೀಲ್, ಗೀತಾ ಪಾಟೀಲ್, ಯುವಕರಾದ ಅಶೋಕ ಭಜಂತ್ರಿ, ಬಸವರಾಜ ಭೋವಿ, ಖಾಸಿಂ ಸಾಬ್ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



