ಹಟ್ಟಿ ಚಿನ್ನದ ಗಣಿ: ಪಟ್ಟಣದ ಹಳೆಯ ಪಂಚಾಯಿತಿ ವ್ಯಾಪ್ತಿಯ ಜಾಗೀರದಾರ ನಗರದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಕಳೆದ 19 ವರ್ಷಗಳಿಂದ ನಿರಂತರವಾಗಿ ‘ಹಟ್ಟಿ ಕಾ ದೊಡ್ಡಪ್ಪ ಗಣಪತಿ’ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನಡೆಸಿಕೊಂಡು ಬರಲಾಗುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಉತ್ಸವದ ಅಂಗವಾಗಿ ಭಕ್ತರು ಹಾಗೂ ಸಾರ್ವಜನಿಕರಿಗಾಗಿ ವಿಶೇಷ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ಸುಮಾರು 25 ಬಗೆಯ ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ವಿತರಿಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗಣಪತಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಬೇಕೆಂದು ಗಣಪತಿ ಮಂಡಳಿಯ ಮುಖಂಡರು ಮನವಿ ಮಾಡಿದ್ದಾರೆ.
ಕಳೆದ 19 ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಈ ಭಾಗದ ಧಾರ್ಮಿಕ ಭಕ್ತಿ, ಸಾಮಾಜಿಕ ಒಗ್ಗಟ್ಟು ಹಾಗೂ ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಅನ್ನಸಂತರ್ಪಣೆ ಸಂದರ್ಭದಲ್ಲಿ ಯುವಕರು, ಗುರುಹಿರಿಯರು, ಮುಖಂಡರು ಹಾಗೂ ಸ್ಥಳೀಯರು ಸಕ್ರಿಯವಾಗಿ ಭಾಗವಹಿಸಿ ಭಕ್ತರಿಗೆ ಶಿಸ್ತುಬದ್ಧವಾಗಿ ಪ್ರಸಾದ ವಿತರಿಸುವ ಮೂಲಕ ಸೇವಾ ಮನೋಭಾವ ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಗಣಪತಿ ಮಂಡಳಿಯ ಪದಾಧಿಕಾರಿಗಳು ಮತ್ತು ಸ್ವಯಂಸೇವಕರು ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದ್ದರು.



