ಮಾನ್ವಿ: ತಾಲೂಕು ಆಡಳಿತದ ವತಿಯಿಂದ ಅಕ್ಟೋಬರ್ 26ರಂದು ಶ್ರೀ ವಾಲ್ಮೀಕಿ ಮಹರ್ಷಿಗಳ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ವಾಲ್ಮೀಕಿ ಮಹರ್ಷಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿರುವ ಮಹರ್ಷಿ ವಾಲ್ಮೀಕಿ ಅವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಬಳಿಕ ಮಹರ್ಷಿಗಳ ಭಾವಚಿತ್ರವನ್ನು ಸಾರೋಟಿನಲ್ಲಿ ಇರಿಸಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ತಹಸೀಲ್ದಾರ್ ಕಚೇರಿಯವರೆಗೆ ಭವ್ಯ ಮೆರವಣಿಗೆ ನಡೆಸಲಾಗುವುದು ಎಂದು ವಿವರಿಸಿದರು.
ಮೆರವಣಿಗೆಯ ನಂತರ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಗುವುದು. ಮಹರ್ಷಿಗಳ ಜೀವನ, ಆದರ್ಶಗಳು ಹಾಗೂ ತತ್ವಗಳ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು. ಅಲ್ಲದೆ, ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವುದರ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ವಾಲ್ಮೀಕಿ ಮಹರ್ಷಿಗಳ ಜಯಂತಿಯು ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಭಾಗಯ್ಯ ನಾಯಕ ಜಯಂತಿ ಆಚರಣೆಯ ಸಿದ್ಧತೆಗಳು ಹಾಗೂ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ಸಮುದಾಯದ ಮುಖಂಡ ಹನುಮೇಶ ನಾಯಕ ಸದಾಪುರ, ಮಾನ್ವಿ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರೂ ಸಮುದಾಯದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮುದಾಯದ ಅನುಕೂಲಕ್ಕಾಗಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಹಾಗೂ ವಾಲ್ಮೀಕಿ ವೃತ್ತದ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮರ್ಪಕ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದರು. ಈ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಖಾಲೀದ್ ಅಹಮ್ಮದ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ಬಿ. ದೇವಮಾನೆ, ಪೊಲೀಸ್ ಇನ್ಸ್ಪೆಕ್ಟರ್ ಸೋಮಶೇಖರ ಎಸ್. ಕೆಂಚರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ಶರಣಬಸವರಾಜ ಉಪಸ್ಥಿತರಿದ್ದರು.
ಸಮುದಾಯದ ಮುಖಂಡರಾದ ಮಾಜಿ ಎಪಿಎಂಸಿ ಸದಸ್ಯ ಶಿವರಾಜ್ ನಾಯಕ, ಬುಡ್ಡಪ್ಪ ನಾಯಕ, ಅಯ್ಯಪ್ಪ ನಾಯಕ ಮ್ಯಾಕಲ್, ಶರಣಬಸವ ನಾಯಕ, ರಾಮಣ್ಣ ನಾಯಕ, ಅಮರೇಶ ನಾಯಕ, ಆಂಜನೇಯ ನಾಯಕ, ಹನುಮೇಶ ನಾಯಕ ಸದಾಪುರ, ಅಂಬಣ್ಣ ನಾಯಕ, ರಮೇಶ್ ನಾಯಕ್, ಚಂದ್ರು, ಮೌನೇಶ ನಾಯಕ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.



