ಮಾನ್ವಿ: ಪಟ್ಟಣದ ಶ್ರೀ ಜೈ ಸಂತೋಷಿ ಮಾತಾ ದೇವಸ್ಥಾನದ 27ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ರಥೋತ್ಸವವು ಭಕ್ತಿಭಾವ ಹಾಗೂ ಸಂಭ್ರಮದಿಂದ ಜರುಗಿತು. ಅಪಾರ ಭಕ್ತರ ಸಮ್ಮುಖದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಭಾಗವಹಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ದೇವಸ್ಥಾನಕ್ಕೆ ಭೇಟಿ ನೀಡಿದ ಎನ್.ಎಸ್. ಬೋಸರಾಜು ಅವರು ಶ್ರೀ ಜೈ ಸಂತೋಷಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಜನತೆಯ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಬಳಿಕ ದೇವಸ್ಥಾನದ ಆವರಣದಲ್ಲಿ ಅಲಂಕೃತ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಭಕ್ತಿ, ಶ್ರದ್ಧೆ, ಸಾಮರಸ್ಯ ಹಾಗೂ ಒಗ್ಗಟ್ಟಿನ ಭಾವನೆಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಶ್ರೀ ಜೈ ಸಂತೋಷಿ ಮಾತೆಯ ಆಶೀರ್ವಾದ ಎಲ್ಲರ ಮೇಲಿರಲಿ. ಪ್ರತಿಯೊಬ್ಬರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು.
ದೇವಸ್ಥಾನದ 27ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಥೋತ್ಸವದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ದೇವಿಯ ದರ್ಶನ ಪಡೆದು ಪುನೀತರಾದರು.
ಕಾರ್ಯಕ್ರಮದ ಅಂಗವಾಗಿ ಶ್ರೀ ಜೈ ಸಂತೋಷಿ ಮಾತಾ ದೇವಸ್ಥಾನ ಸಮಿತಿ ವತಿಯಿಂದ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಮತ್ತು ಶಾಸಕ ಜಿ. ಹಂಪಯ್ಯ ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರೇಶ್ವರ ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷ ಆರ್. ಮುತ್ತುರಾಜ್ ಶೆಟ್ಟಿ, ಮಾಂಚಾಲಿ ವೆಂಕಯ್ಯ ಶೆಟ್ಟಿ, ಬಿ. ಈರಣ್ಣ ಶೆಟ್ಟಿ, ವಕೀಲ ಬಿ.ಕೆ. ಅಮರೇಶಪ್ಪ, ಮಹಾಂತೇಶ ಸ್ವಾಮಿ ರೌಡ್ರು, ಸೈಯದ್ ಖಾಲಿದ್ ಖಾದ್ರಿ, ರಾಜ ಸುಭಾಷ್ ಚಂದ್ರ ನಾಯಕ್, ಡಿ. ರಾಘವೇಂದ್ರ ಶೆಟ್ಟಿ, ಆರ್. ಶಿವಯ್ಯ ಶೆಟ್ಟಿ, ರಾಮಾಂಜನೇಯ ಶೆಟ್ಟಿ, ವಿಜಯ್ ರಾವ್ ಕುಪನೇಶಿ, ಚನ್ನಪ್ಪಗೌಡ ಬೆಟ್ಟದೂರು, ಸತ್ತಾರ್ ಬಂಗ್ಲೆವಾಲೆ, ಶಿವಕುಮಾರ್ ಗೌಡ ಬಾಗಲವಾಡ, ಮುಸ್ತಫಾ, ರಸುಲ್ ಖುರೇಶಿ, ಹಂಪಯ್ಯ ನಾಯಕ್, ಕಾಮೇಶ್, ರಾಘವೇಂದ್ರ ಶೆಟ್ಟಿ ಸೇರಿದಂತೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.



