ಬೆಂಗಳೂರು, ಸೆ.25 (ಕರ್ನಾಟಕ ವಾರ್ತೆ): ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (RPC ಮತ್ತು KK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೇಹದಾರ್ಢ್ಯ ಪರೀಕ್ಷೆ (PST) ಹಾಗೂ ಸಹಿಷ್ಣುತಾ ಪರೀಕ್ಷೆ (ET) ಸೆ.28ರಿಂದ ಆರಂಭವಾಗಲಿದ್ದು, ಪೊಲೀಸ್ ನೇಮಕಾತಿ ವಿಭಾಗವು ವಲಯವಾರು ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಒಟ್ಟು 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ರಾಜ್ಯದ ವಿವಿಧ ಘಟಕಗಳಿಂದ ಒಟ್ಟು 19,396 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಉಳಿಕೆ ಮೂಲ ವೃಂದದ (RPC) 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ (KK) ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರು ನಗರ ಘಟಕ: ಉಳಿಕೆ ಮೂಲ ವೃಂದದ 2,015 ಹುದ್ದೆಗಳಿಗೆ 9,887 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಸೆ.28ರಿಂದ ಅ.5ರವರೆಗೆ ಪರೀಕ್ಷೆಗಳು ನಡೆಯಲಿವೆ. ಚಾಮರಾಜಪೇಟೆಯ ಸಿರ್ಸಿ ಸರ್ಕಲ್ನ ಸಿಎಆರ್ (ಹೆಚ್ಕ್ಯೂ) ಮೈದಾನ, ಆಡುಗೋಡಿಯ ಸಿಎಆರ್ (ದಕ್ಷಿಣ) ಮೈದಾನ ಹಾಗೂ ಆರ್.ಕೆ. ಹೆಗಡೆ ನಗರದ ತನಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಎಆರ್ (ಉತ್ತರ) ಪರೇಡ್ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.
ಕೇಂದ್ರ ವಲಯ: ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆ ಹಾಗೂ ರೈಲ್ವೆ ಘಟಕಗಳ 200 ಹುದ್ದೆಗಳಿಗೆ 946 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಸೆ.28ರಿಂದ ಅ.3ರವರೆಗೆ ಬೆಂಗಳೂರಿನ ಕೊರಮಂಗಲದ ಮಡಿವಾಳ ಮಾರುಕಟ್ಟೆ ಎದುರಿನ 3ನೇ ಬೆಟಾಲಿಯನ್ ಕೆಎಸ್ಆರ್ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.
ದಕ್ಷಿಣ ವಲಯ: ಮೈಸೂರು ನಗರ, ಮೈಸೂರು ಜಿಲ್ಲೆ, ಹಾಸನ, ಕೊಡಗು, ಚಾಮರಾಜನಗರ ಹಾಗೂ ಮಂಡ್ಯ ಘಟಕಗಳ 395 ಹುದ್ದೆಗಳಿಗೆ 1,891 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಸೆ.28ರಿಂದ ಅ.5ರವರೆಗೆ ಮೈಸೂರಿನ ರೇಸ್ ಕೋರ್ಸ್ ಹಿಂಭಾಗದ ಸಿಟಿ ಆರ್ಮ್ಸ್ ರಿಸರ್ವ್ (CAR) ಪರೇಡ್ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.
ಪೂರ್ವ ವಲಯ: ಶಿವಮೊಗ್ಗ, ಹಾವೇರಿ, ದಾವಣಗೆರೆ ಹಾಗೂ ಚಿತ್ರದುರ್ಗ ಘಟಕಗಳ 250 ಹುದ್ದೆಗಳಿಗೆ 1,234 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಸೆ.29ರಿಂದ ಅ.6ರವರೆಗೆ ಶಿವಮೊಗ್ಗದ ನವಿಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.
ಪಶ್ಚಿಮ ವಲಯ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ (ಕಾರವಾರ), ಚಿಕ್ಕಮಗಳೂರು ಹಾಗೂ ಮಂಗಳೂರು ನಗರ ಘಟಕಗಳ 395 ಹುದ್ದೆಗಳಿಗೆ 1,803 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಸೆ.28ರಿಂದ ಅ.3ರವರೆಗೆ ಮಂಗಳೂರಿನ ಲಾಲ್ಬಾಗ್ನ ಮಂಗಳ ಕ್ರೀಡಾಂಗಣದಲ್ಲಿ ಪರೀಕ್ಷೆ ನಿಗದಿಯಾಗಿದೆ.
ಉತ್ತರ ವಲಯ: ಗದಗ ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಘಟಕಗಳ 110 ಹುದ್ದೆಗಳಿಗೆ 549 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಸೆ.29 ಮತ್ತು 30ರಂದು ಬೆಳಗಾವಿಯ ವಿಟಿಯು ಸಮೀಪದ ಮಚ್ಚೆಯಲ್ಲಿರುವ 2ನೇ ಬೆಟಾಲಿಯನ್ ಕೆಎಸ್ಆರ್ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.
ಬಳ್ಳಾರಿ ವಲಯ (RPC): ಬಳ್ಳಾರಿ ಮತ್ತು ರಾಯಚೂರು ಘಟಕಗಳ 30 ಹುದ್ದೆಗಳಿಗೆ 144 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಅ.5 ಮತ್ತು 6ರಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ನ ಹೊಸಹಳ್ಳಿ ಬಳಿಯ ಕೆಎಸ್ಆರ್ಪಿ ಪಿ.ಟಿ.ಎಸ್. ಮೈದಾನದಲ್ಲಿ (ಐಆರ್ಬಿ ಕ್ಯಾಂಪಸ್) ಪರೀಕ್ಷೆ ನಡೆಯಲಿದೆ.
ಕಲ್ಯಾಣ ಕರ್ನಾಟಕ ವೃಂದ: ಬೆಂಗಳೂರು ನಗರ ವ್ಯಾಪ್ತಿಯ 171 ಹುದ್ದೆಗಳಿಗೆ 833 ಅಭ್ಯರ್ಥಿಗಳು ಅರ್ಹರಾಗಿದ್ದು, ಅ.8ರಂದು ಚಾಮರಾಜಪೇಟೆಯ ಸಿಎಆರ್ ಪರೇಡ್ ಮೈದಾನ (ಹೆಚ್ಕ್ಯೂ) ಹಾಗೂ ಆಡುಗೋಡಿಯ ಸಿಎಆರ್ ಪರೇಡ್ ಮೈದಾನದಲ್ಲಿ (ದಕ್ಷಿಣ) ಪರೀಕ್ಷೆ ನಡೆಯಲಿದೆ.
ಬಳ್ಳಾರಿ ವಲಯ (KK): ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಘಟಕಗಳ 174 ಹುದ್ದೆಗಳಿಗೆ 869 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅ.12ರಿಂದ 15ರವರೆಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಹೊಸಹಳ್ಳಿಯ ಕೆಎಸ್ಆರ್ಪಿ ಪಿ.ಟಿ.ಎಸ್. ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.
ಈಶಾನ್ಯ ವಲಯ: ಕಲಬುರಗಿ ನಗರ, ಕಲಬುರಗಿ ಜಿಲ್ಲೆ ಹಾಗೂ ಬೀದರ್ ಘಟಕಗಳ 251 ಹುದ್ದೆಗಳಿಗೆ 1,240 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅ.12ರಿಂದ 14ರವರೆಗೆ ಕಲಬುರಗಿಯ ತಾಜ್ ಸುಲ್ತಾನ್ಪುರದಲ್ಲಿರುವ 6ನೇ ಬೆಟಾಲಿಯನ್ ಕೆಎಸ್ಆರ್ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.
ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ತಮ್ಮ ಕರೆಪತ್ರವನ್ನು (Call Letter) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಕರೆಪತ್ರದಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಪೊಲೀಸ್ ನೇಮಕಾತಿ ವಿಭಾಗ ತಿಳಿಸಿದೆ.



