ಜಾಲಹಳ್ಳಿ, ಸೆ.26: ಮುಂಗಾರು ಮಳೆಯ ಕೊರತೆಯಿಂದ ಜಿಲ್ಲೆಯಾದ್ಯಂತ ಬರ ಪರಿಸ್ಥಿತಿ ಉಂಟಾಗಿದ್ದು, ರಾಯಚೂರು ಜಿಲ್ಲೆಯನ್ನು ಭೀಕರ ಬರಗಾಲ ಪ್ರದೇಶವೆಂದು ಘೋಷಿಸಬೇಕು ಹಾಗೂ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದಿಂದ ಸೆ.28ರಂದು ರಾಯಚೂರಿನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ದೇವದುರ್ಗ ತಾಲೂಕಿನ ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹನುಮಗೌಡ ಮಾಲಿ ಪಾಟೀಲ್ ಈ ಕುರಿತು ಮಾಹಿತಿ ನೀಡಿದರು.

ಸೆ.28ರಂದು ಬೆಳಿಗ್ಗೆ 10 ಗಂಟೆಗೆ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಲಿದೆ. ಜಿಲ್ಲೆಯ ವಿವಿಧ ಭಾಗಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಮಳೆಯ ಕೊರತೆಯಿಂದ ತೊಗರಿ, ಹತ್ತಿ, ಭತ್ತ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ. ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಉಂಟಾಗಿದ್ದು, ಕೃಷಿ ಕೂಲಿಕಾರರಿಗೆ ಉದ್ಯೋಗದ ಕೊರತೆ ಎದುರಾಗಿದೆ. ಹೀಗಾಗಿ ರೈತರು ಹಾಗೂ ಕೃಷಿ ಕಾರ್ಮಿಕರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬರಪೀಡಿತ ಪ್ರದೇಶಗಳಲ್ಲಿ ಬೆಳೆ ನಷ್ಟವನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಅಂದಾಜಿಸಬೇಕು. ಅರ್ಹ ರೈತರಿಗೆ ಪರಿಹಾರವನ್ನು ವಿಳಂಬ ಮಾಡದೆ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ಜಾನುವಾರುಗಳಿಗೆ ಅಗತ್ಯ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ತುಂಗಭದ್ರಾ ಎಡದಂಡೆ ನಾಲೆ ಹಾಗೂ ನಾರಾಯಣಪುರ ಬಲದಂಡೆ ನಾಲೆಯ ಉಪಕಾಲುವೆಗಳಲ್ಲಿ ಬೆಳೆದಿರುವ ಜಂಗಲ್ ಮತ್ತು ಸಂಗ್ರಹವಾಗಿರುವ ಹೂಳನ್ನು ತೆರವುಗೊಳಿಸಿ, ಕೊನೆಯ ಭಾಗದ ರೈತರ ಜಮೀನುಗಳಿಗೂ ಸಮರ್ಪಕವಾಗಿ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು. ರೈತರ ಪಂಪ್‌ಸೆಟ್‌ಗಳಿಗೆ ಹಗಲು ಆರು ಗಂಟೆ ಹಾಗೂ ರಾತ್ರಿ ಆರು ಗಂಟೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ಜೋಳ ಖರೀದಿ ಕೇಂದ್ರಗಳಲ್ಲಿ ಈಗಾಗಲೇ ಜೋಳ ಮಾರಾಟ ಮಾಡಿರುವ ರೈತರಿಗೆ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಮುಂಗಾರು ಹಾಗೂ ಹಿಂಗಾರು ಎಂಬ ಭೇದ ಮಾಡದೆ ಜೋಳದ ಬೆಳೆಯನ್ನು ಪರಿಗಣಿಸಿ ಜಿಪಿಎಸ್ ಮಾಡಬೇಕು. ನಾರಾಯಣಪುರ ಬಲದಂಡೆ ನಾಲೆಯಲ್ಲಿ ಪ್ರಸ್ತುತ ಅನುಸರಿಸುತ್ತಿರುವ ವಾರಾಬಂದಿ ಪದ್ಧತಿಯನ್ನು ಬದಲಿಸಿ, ಏಳು ದಿನ ಬಂದ್ ಹಾಗೂ 14 ದಿನ ನೀರು ಹರಿಸುವ ಪದ್ಧತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಲಿಂಗಸುಗೂರು ಮತ್ತು ಮುದಗಲ್ ಎಪಿಎಂಸಿಗಳಲ್ಲಿ ರೈತರಿಂದ ಅನಧಿಕೃತವಾಗಿ ಕಮಿಷನ್ ವಸೂಲಿ ಮಾಡುವುದು ಹಾಗೂ ‘ಸೂಟ್’ ತೆಗೆಯಲಾಗುತ್ತಿದೆ ಎಂಬ ಆರೋಪಗಳಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಫಸಲ್ ಬಿಮಾ ಯೋಜನೆಯಡಿ ಪ್ರೀಮಿಯಂ ಪಾವತಿಸಿರುವ ಅರ್ಹ ರೈತರಿಗೆ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ವಿಮಾ ಪರಿಹಾರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘದ ಮುಖಂಡರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್, ತಾಲೂಕು ಉಪಾಧ್ಯಕ್ಷ ಹುಸೇನ್ ಭಾಷಾ, ಮುಂಡರಗಿ ಗ್ರಾಮ ಘಟಕದ ಅಧ್ಯಕ್ಷ ಮುದ್ದಯ್ಯ, ಗ್ರಾಮ ಮುಖಂಡ ಸಿದ್ದಪ್ಪ ಪೂಜಾರಿ, ತಾಲೂಕು ಕಾರ್ಯದರ್ಶಿ ತಿಮ್ಮಣ್ಣ ನಾಯಕ, ಜಾಲಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ಗಣೇಕಲ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.