ರಾಯಚೂರು, ನ.2: ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನವೆಂಬರ್ 3ರಿಂದ 5ರವರೆಗೆ ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮೂರು ದಿನಗಳ ಜಿಲ್ಲಾ ನಾಟಕೋತ್ಸವ ಆಯೋಜಿಸಲಾಗಿದ್ದು, ವೈವಿಧ್ಯಮಯ ನಾಟಕಗಳ ಪ್ರದರ್ಶನದ ಮೂಲಕ ರಂಗಕಲೆಯ ಸೊಬಗನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗುವುದು ಎಂದು ರಂಗಸಿರಿ ಸಾಂಸ್ಕೃತಿಕ ಕಲಾ ಬಳಗದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ರಂಗಭೂಮಿಗೆ ಉತ್ತೇಜನ ನೀಡುವುದು, ನಾಟಕ ಕಲೆಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವುದು ಹಾಗೂ ರಂಗಾಸಕ್ತರಲ್ಲಿ ಕಲಾಭಿರುಚಿ ಬೆಳೆಸುವ ಉದ್ದೇಶದಿಂದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ನಾಟಕೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರ ಹನುಮಾನ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಘುನಾಥರೆಡ್ಡಿ ಮನ್ಸಲಾಪುರ ಮತ್ತು ರಘುಪತಿ ಪೂಜಾರ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.
ನವೆಂಬರ್ 3ರಂದು ಸಂಜೆ 6 ಗಂಟೆಗೆ ಎಂ.ಡಿ. ಪೋತೆ ರಚನೆಯ, ಪದ್ಮಾ ಕೋಟಾ ನಿರ್ದೇಶನದ ‘ರಮಾಬಾಯಿ ಅಂಬೇಡ್ಕರ್’ ನಾಟಕ ಪ್ರದರ್ಶನಗೊಳ್ಳಲಿದೆ. ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
ನವೆಂಬರ್ 4ರಂದು ಸಂಜೆ 6 ಗಂಟೆಗೆ ಜಯಶ್ರೀ ಮಹಾಜನಶೆಟ್ಟಿ ನಿರ್ದೇಶನದ ‘ಕಲ್ಯಾಣ ಕ್ರಾಂತಿಯ ಮುನ್ನುಡಿ’ ನಾಟಕ ಪ್ರದರ್ಶನ ನಡೆಯಲಿದೆ. ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಅಧ್ಯಕ್ಷತೆ ವಹಿಸಲಿದ್ದಾರೆ.
ನವೆಂಬರ್ 5ರಂದು ಸಂಜೆ 6 ಗಂಟೆಗೆ ದೇವಣ್ಣ ಬಿಚ್ಚಾಲಿ ನಿರ್ದೇಶನದ ‘ಶಿವಶರಣ ಕಂಬಳಿ ನಾಗೀದೇವ’ ನಾಟಕ ಪ್ರದರ್ಶನದೊಂದಿಗೆ ಮೂರು ದಿನಗಳ ನಾಟಕೋತ್ಸವಕ್ಕೆ ತೆರೆ ಬೀಳಲಿದೆ. ಸಮಾರೋಪ ದಿನದ ಕಾರ್ಯಕ್ರಮವನ್ನು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಉದ್ಘಾಟಿಸಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ರಂಗಭೂಮಿ ಕಲಾವಿದರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಜಿಲ್ಲೆಯ ರಂಗಭೂಮಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ್ದಾಗಿದ್ದು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ರಂಗಸ್ವಾಮಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿಗಳಾದ ಅಯ್ಯನಗೌಡ ನಂದಿಹಳ್ಳಿ, ವೆಂಕಟನರಸಿಂಹಲು, ಚಂದ್ರಶೇಖರ ಏಗನೂರು, ಜೋಸೆಫ್ ಹಾಗೂ ರಾಜೇಂದ್ರಪ್ಪ ಉಪಸ್ಥಿತರಿದ್ದರು.



