ರಾಯಚೂರು: ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಉಂಟಾದ ಚಂಡಮಾರುತದ ಪ್ರಭಾವದಿಂದ ರಾಯಚೂರು ತಾಲೂಕಿನ ಸರ್ಜಾಪುರ ಗ್ರಾಮದಲ್ಲಿ ಸತತ ಮೂರು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಟಾವು ಮಾಡಿ ಒಣಗಿಸಲು ಹಾಕಿದ್ದ ಬತ್ತದ ಕವಳೆ ಮಳೆಗೆ ಒದ್ದೆಯಾಗಿದ್ದು, ಬೆಳೆ ಹಾನಿಯ ಆತಂಕ ಎದುರಾಗಿದೆ.
ಕಳೆದ ಹಲವು ತಿಂಗಳುಗಳಿಂದ ಹಗಲಿರುಳು ಶ್ರಮಿಸಿ ಬೆಳೆದ ಬತ್ತದ ಬೆಳೆ ಕಟಾವಿನ ಹಂತ ತಲುಪಿದಾಗ ಸುರಿದ ಅಕಾಲಿಕ ಮಳೆ ರೈತರ ನಿರೀಕ್ಷೆಗಳಿಗೆ ತಣ್ಣೀರೆರಚಿದೆ. ಕಟಾವು ಮಾಡಿದ ಬತ್ತದ ಕವಳೆಯನ್ನು ಒಣಗಿಸಲು ಜಮೀನುಗಳಲ್ಲಿ ಹರಡಲಾಗಿತ್ತು. ಆದರೆ, ಏಕಾಏಕಿ ಸುರಿದ ಭಾರೀ ಮಳೆಯಿಂದಾಗಿ ಕವಳೆ ಸಂಪೂರ್ಣ ಒದ್ದೆಯಾಗಿದ್ದು, ರೈತರು ಅದನ್ನು ರಕ್ಷಿಸಿಕೊಳ್ಳಲು ಪರದಾಡುವಂತಾಯಿತು.
ಮಳೆಯಿಂದಾಗಿ ಬತ್ತದಲ್ಲಿ ತೇವಾಂಶ ಹೆಚ್ಚಾಗುವ ಸಾಧ್ಯತೆಯಿದ್ದು, ಸಮರ್ಪಕವಾಗಿ ಒಣಗಿಸದಿದ್ದರೆ ಧಾನ್ಯದ ಗುಣಮಟ್ಟ ಕುಸಿಯುವ ಆತಂಕ ಎದುರಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ದೊರೆಯದೆ ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
ಕೃಷಿ ಚಟುವಟಿಕೆಗಳಿಗಾಗಿ ಸಾಲ ಮಾಡಿ, ಬೀಜ, ಗೊಬ್ಬರ, ಕೂಲಿ ಹಾಗೂ ಇತರೆ ಕೃಷಿ ವೆಚ್ಚಗಳನ್ನು ಭರಿಸಿ ಬೆಳೆ ಬೆಳೆದ ರೈತರಿಗೆ ಕಟಾವಿನ ಸಮಯದಲ್ಲಿ ಸುರಿದ ಮಳೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಬೆಳೆ ಕೈಗೆ ಸಿಗುವ ಹೊತ್ತಿನಲ್ಲಿ ಪ್ರಕೃತಿಯ ಅಬ್ಬರದಿಂದ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂಬುದು ಸರ್ಜಾಪುರ ರೈತರ ನೋವಾಗಿದೆ. ಮಳೆಯಿಂದ ಹಾನಿಗೊಳಗಾದ ಬತ್ತದ ಬೆಳೆ ಎಷ್ಟರಮಟ್ಟಿಗೆ ನಷ್ಟವಾಗಿದೆ ಎಂಬುದು ಸಂಪೂರ್ಣವಾಗಿ ಒಣಗಿಸಿದ ನಂತರವೇ ತಿಳಿಯಲಿದ್ದು, ಸದ್ಯ ರೈತರು ತಮ್ಮ ಬೆಳೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ.



