ಲಿಂಗಸುಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ಕರಡಕಲ್ ಹೊರವಲಯದಲ್ಲಿ ಸುಮಾರು ₹30 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡಕ್ಕೆ ಸೂಕ್ತ ಭದ್ರತೆ ಇಲ್ಲದ ಕಾರಣ ಕಿಡಿಗೇಡಿಗಳು ನುಗ್ಗಿ ಹಾನಿಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಸ್ಪತ್ರೆ ನಿರ್ಮಾಣಗೊಂಡು ಸುಮಾರು ಒಂದು ವರ್ಷ ಕಳೆದರೂ ಉದ್ಘಾಟನೆಯಾಗದೆ ಇರುವುದರಿಂದ ಕಟ್ಟಡದ ಸುರಕ್ಷತೆ ನಿರ್ಲಕ್ಷ್ಯಕ್ಕೊಳಗಾಗಿದೆ. ಆಸ್ಪತ್ರೆ ಆವರಣದಲ್ಲಿ ಭದ್ರತಾ ಸಿಬ್ಬಂದಿ ಅಥವಾ ಕಾವಲುಗಾರರನ್ನು ನಿಯೋಜಿಸದಿರುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಸ್ಥಳೀಯ ಸಾರ್ವಜನಿಕರು ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ರಾತ್ರಿ ವೇಳೆ ಆಸ್ಪತ್ರೆ ಆವರಣಕ್ಕೆ ನುಗ್ಗಿದ ಕಿಡಿಗೇಡಿಗಳು ಕಟ್ಟಡಕ್ಕೆ ಅಳವಡಿಸಿದ್ದ ಹವಾನಿಯಂತ್ರಣ ಯಂತ್ರಗಳ (ಎಸಿ) ಪೈಪ್‌ಗಳನ್ನು ಕಿತ್ತು ಹಾನಿಗೊಳಿಸಿದ್ದಾರೆ. ಅಲ್ಲದೆ, ಆಸ್ಪತ್ರೆಯ ಮುಖ್ಯದ್ವಾರದ ಬೀಗ ಮುರಿದು ಒಳನುಗ್ಗಿ ಕಟ್ಟಡದ ವಿವಿಧ ಭಾಗಗಳಿಗೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ.

ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ವೆಚ್ಚ ಮಾಡಿ ನಿರ್ಮಿಸಿರುವ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಉದ್ಘಾಟನೆ ವಿಳಂಬವಾಗುತ್ತಿರುವುದರ ಜೊತೆಗೆ ಕಟ್ಟಡದ ನಿರ್ವಹಣೆ ಮತ್ತು ಭದ್ರತೆಯ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಆಸ್ಪತ್ರೆಗೆ ಸೂಕ್ತ ಭದ್ರತೆ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಲೆಬಾಳುವ ವೈದ್ಯಕೀಯ ಉಪಕರಣಗಳು, ವಿದ್ಯುತ್ ಸಾಮಗ್ರಿಗಳು ಹಾಗೂ ಇತರ ಸೌಲಭ್ಯಗಳು ಕಳ್ಳತನವಾಗುವ ಆತಂಕವಿದೆ. ಇಂತಹ ಘಟನೆಗಳು ಮರುಕಳಿಸಿದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಯನ್ನು ನಾಗರಿಕರು ಮುಂದಿಟ್ಟಿದ್ದಾರೆ.

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕಟ್ಟಡಕ್ಕೆ ಹಾನಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಸುರಕ್ಷತೆಗೆ ಅಗತ್ಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದರ ಜೊತೆಗೆ ಉದ್ಘಾಟನೆಗೆ ಇರುವ ಅಡೆತಡೆಗಳನ್ನು ನಿವಾರಿಸಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಶೀಘ್ರ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.