ಜಾಲಹಳ್ಳಿ, ಅ.8: ದೇವದುರ್ಗ ತಾಲೂಕಿನ ಹೊಸೂರು ಸಿದ್ದಾಪುರ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀ ಉಟಕನೂರು ತಾತನವರ 31ನೇ ಜಾತ್ರಾ ಮಹೋತ್ಸವ ಹಾಗೂ ಮಹಾದಾಸೋಹ ಭಕ್ತಿಭಾವ ಮತ್ತು ಸಡಗರದಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಳೆದ 31 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಹೊಸೂರು ಸಿದ್ದಾಪುರ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಮರಿಬಸವಲಿಂಗ ತಾತನವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಜಾತ್ರೆಯ ಮೊದಲ ದಿನವಾದ ಅ.7ರಂದು ಸಂಜೆ ಶ್ರೀ ಮರಿಬಸವಲಿಂಗ ತಾತನವರ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಜನಾ ಮಂಡಳಿಗಳು ಹಾಗೂ ಸ್ಥಳೀಯ ಗ್ರಾಮಸ್ಥರಿಂದ ರಾತ್ರಿ ಪೂರ್ತಿ ಭಜನಾ ಕಾರ್ಯಕ್ರಮ ನಡೆಯಿತು. ಮುಂಜಾನೆಯಿಂದ ಮಧ್ಯಾಹ್ನದವರೆಗೂ ಭಕ್ತಿಗೀತೆ ಹಾಗೂ ಭಜನೆಗಳು ಮುಂದುವರಿದು ಜಾತ್ರಾ ಸ್ಥಳದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.

ಅದೇ ದಿನ ಸಂಜೆ ಆಯೋಜಿಸಿದ್ದ ಗಾನಸುಧೆ ಕಾರ್ಯಕ್ರಮದಲ್ಲಿ ಶಿವಲಿಂಗಯ್ಯ ಸ್ವಾಮಿ ಗಲಗ, ನಾಗರಾಜ ಏರುಂಡಿ ಹಾಗೂ ಈರಯ್ಯ ತಾತ ಜಾಲಹಳ್ಳಿ ಅವರು ಭಕ್ತಿಗೀತೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ನೆರೆದಿದ್ದ ಭಕ್ತರನ್ನು ರಂಜಿಸಿದರು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಭಾಗವಹಿಸಿದ್ದರು.

ಅ.8ರಂದು ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ಗಮನ ಸೆಳೆದವು. ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಮಸರಕಲ್ ಗ್ರಾಮದ ಮುದುಕಪ್ಪ ನಾಯಕ ಪ್ರಥಮ ಸ್ಥಾನ ಪಡೆದು 5 ತೊಲಿ ಬೆಳ್ಳಿ ಕಡಗವನ್ನು ಬಹುಮಾನವಾಗಿ ಪಡೆದರು. ಸಾಬಣ್ಣ ಕರಿಗುಡ್ಡ ದ್ವಿತೀಯ ಸ್ಥಾನ ಪಡೆದು ₹2,500 ನಗದು ಬಹುಮಾನ ಪಡೆದರು.

ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ 118 ಕೆ.ಜಿ. ತೂಕದ ಕಲ್ಲನ್ನು ಎತ್ತಿದ ರಾಯಚೂರು ತಾಲೂಕಿನ ನಾಗಲದೊಡ್ಡಿಯ ಪ್ರತಾಪ್ ನಾಯಕ ಪ್ರಥಮ ಸ್ಥಾನ ಪಡೆದು 5 ತೊಲಿ ಬೆಳ್ಳಿ ಕಡಗವನ್ನು ತಮ್ಮದಾಗಿಸಿಕೊಂಡರು. ದೇವದುರ್ಗದ ಅಂಜು ನಾಯಕ ದ್ವಿತೀಯ ಸ್ಥಾನ ಪಡೆದು ₹2,500 ನಗದು ಬಹುಮಾನ ಪಡೆದರು.

ಗ್ರಾಮೀಣ ಕ್ರೀಡಾ ಪರಂಪರೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ದೈಹಿಕ ಸಾಮರ್ಥ್ಯ ಪ್ರದರ್ಶಿಸಿದರು. ಸ್ಪರ್ಧೆಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಸೇರಿದ್ದರು.

ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾದಾಸೋಹದಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ವಿಶೇಷ ಪೂಜೆ, ಭಜನೆ, ಗಾನಸುಧೆ, ಮಹಾದಾಸೋಹ ಹಾಗೂ ಗ್ರಾಮೀಣ ಕ್ರೀಡಾ ಸ್ಪರ್ಧೆಗಳೊಂದಿಗೆ ಎರಡು ದಿನಗಳ ಶ್ರೀ ಉಟಕನೂರು ತಾತನವರ 31ನೇ ಜಾತ್ರಾ ಮಹೋತ್ಸವ ಭಕ್ತಿಭಾವದಿಂದ ತೆರೆ ಕಂಡಿತು.