ಲಿಂಗಸುಗೂರು: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮದ್ಯ ಮಾರಾಟ ಹಾಗೂ ಸಾಗಾಣಿಕೆಗೆ ನಿರ್ಬಂಧ ವಿಧಿಸಿದ್ದರೂ, ಪಟ್ಟಣದ ಖಾನಾವಳಿಯೊಂದರಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿರುವುದನ್ನು ಪತ್ತೆಹಚ್ಚಿದ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 35.82 ಲೀಟರ್ ಮದ್ಯವನ್ನು ಜಪ್ತಿ ಮಾಡಿದ್ದಾರೆ.
ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಕ್ಟೋಬರ್ 21ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 23ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 22ರಂದು ಅಬಕಾರಿ ನಿರೀಕ್ಷಕಿ ಲಕ್ಷ್ಮೀದೇವಿ ನೇತೃತ್ವದ ತಂಡ ಪಟ್ಟಣದಲ್ಲಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕಲಬುರಗಿ ಮುಖ್ಯರಸ್ತೆಯ ಬಸವಸಾಗರ ಕ್ರಾಸ್ ಬಳಿಯ ಕೃಷ್ಣ ಸ್ಪೆಷಲ್ ಚಿಕನ್ ಮತ್ತು ಮಟನ್ ಖಾನಾವಳಿ ಮೇಲೆ ದಾಳಿ ನಡೆಸಿದೆ.
ಖಾನಾವಳಿಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ವಿವಿಧ ಕಂಪನಿಗಳ ಒಟ್ಟು 317 ಮದ್ಯದ ಟೆಟ್ರಾ ಪ್ಯಾಕ್ಗಳನ್ನು ಪತ್ತೆಹಚ್ಚಿದ್ದಾರೆ. ಇದರಲ್ಲಿ 180 ಎಂ.ಎಲ್. ಸಾಮರ್ಥ್ಯದ 81 ಬ್ಯಾಗ್ಪೈಪರ್ ವಿಸ್ಕಿ ಪ್ಯಾಕ್ಗಳು, 90 ಎಂ.ಎಲ್.ನ 96 ಹೈವರ್ಡ್ಸ್ ಚಿಯರ್ಸ್ ವಿಸ್ಕಿ ಪ್ಯಾಕ್ಗಳು, 90 ಎಂ.ಎಲ್.ನ 59 ಬ್ಯಾಗ್ಪೈಪರ್ ವಿಸ್ಕಿ ಪ್ಯಾಕ್ಗಳು ಹಾಗೂ 90 ಎಂ.ಎಲ್.ನ 81 ಒರಿಜಿನಲ್ ಚಾಯ್ಸ್ ವಿಸ್ಕಿ ಪ್ಯಾಕ್ಗಳು ಸೇರಿವೆ.
ಒಟ್ಟು 35.82 ಲೀಟರ್ ಭಾರತೀಯ ತಯಾರಿಕೆಯ ಮದ್ಯವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಖಾನಾವಳಿ ಮಾಲೀಕ ಹಾಗೂ ಗೋನವಾಟ್ಲ ತಾಂಡಾ ನಿವಾಸಿ ಕೃಷ್ಣಪ್ಪ ತಂದೆ ಶೆಟ್ಟಪ್ಪ ರಾಠೋಡ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಕಲಂ 35(3)ರ ಅನ್ವಯ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕರಾದ ಬಸವರಾಜ, ಶರಣಬಸಪ್ಪ, ವಾಹನ ಚಾಲಕ ಅಮರೇಶ ಹಾಗೂ ಗೃಹರಕ್ಷಕ ಸಿಬ್ಬಂದಿ ಪಾಲ್ಗೊಂಡಿದ್ದರು.



