ಲಿಂಗಸುಗೂರು: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ಸಂವಿಧಾನದ 371(ಜೆ) ಕಲಂನಡಿ ದೊರೆಯುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಕಲಬುರಗಿಯಿಂದ ಬಳ್ಳಾರಿವರೆಗೆ ಸೈಕಲ್ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಹಾಗೂ ಸಂಪಾದಕ ಮಲ್ಲಿಕಾರ್ಜುನ ಎಂ. ಪಗಡೆ ತಿಳಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 20ರಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಬಳಿಯಿಂದ ಜಾಗೃತಿ ಯಾತ್ರೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದರ ಜೊತೆಗೆ ಸಂವಿಧಾನದ 371(ಜೆ) ಕಲಂನಡಿ ದೊರೆಯುವ ವಿಶೇಷ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಈ ಭಾಗದ ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸಂವಿಧಾನದ 371(ಜೆ) ಕಲಂ ಜಾರಿಗೆ ಬಂದಿದ್ದರೂ ಅದರ ಪ್ರಯೋಜನಗಳು ಅರ್ಹರಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳಬೇಕಾಗಿದೆ. ವಿಶೇಷವಾಗಿ ಯುವಜನತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರೆಯುವ ಅವಕಾಶಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಸರ್ಕಾರದ ಯೋಜನೆಗಳು ಹಾಗೂ ಸಂವಿಧಾನಾತ್ಮಕ ಸೌಲಭ್ಯಗಳ ಬಗ್ಗೆ ಮಾಹಿತಿ ಕೊರತೆಯಿಂದ ಅರ್ಹರು ಅವಕಾಶಗಳಿಂದ ವಂಚಿತರಾಗಬಾರದು ಎಂದು ಹೇಳಿದರು.

ಈ ಭಾಗದ ಜನರ ನ್ಯಾಯಯುತ ಹಕ್ಕುಗಳನ್ನು ರಕ್ಷಿಸುವುದು, ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಒತ್ತಾಯಿಸುವುದು ಹಾಗೂ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರದ ಗಮನ ಸೆಳೆಯುವುದು ಸೈಕಲ್ ಯಾತ್ರೆಯ ಉದ್ದೇಶವಾಗಿದೆ. ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.

ಕಲಬುರಗಿಯಿಂದ ಬಳ್ಳಾರಿವರೆಗೆ ನಡೆಯುವ ಈ ಜಾಗೃತಿ ಯಾತ್ರೆಯ ಮೂಲಕ ವಿವಿಧ ಪ್ರದೇಶಗಳ ಜನರನ್ನು ಸಂಪರ್ಕಿಸಿ, 371(ಜೆ) ಕಲಂನ ಮಹತ್ವ ಹಾಗೂ ಅದರಡಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ಈ ಜಾಗೃತಿ ಅಭಿಯಾನಕ್ಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರೈತರು, ಯುವಜನತೆ ಹಾಗೂ ಸಾರ್ವಜನಿಕರು ಬೆಂಬಲ ನೀಡಬೇಕು. ಪ್ರಾದೇಶಿಕ ಅಭಿವೃದ್ಧಿ ಮತ್ತು ಜನರ ಹಕ್ಕುಗಳ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಕೆಆರ್‌ಎಸ್ ಪಕ್ಷದ ವಿಜಯ ಪೋಳ, ನಿವೃತ್ತ ಸೈನಿಕ ಶೇಖರಪ್ಪ ಗೋನವಾರ, ಜಲಾಲುದ್ದೀನ್, ವಿಶ್ವನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.