ದೇವದುರ್ಗ: ದೇವದುರ್ಗ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ₹4,84,408.36 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶರಣಗೌಡ ಪಿ. ಮದರಕಲ್ ತಿಳಿಸಿದರು.

ಪಟ್ಟಣದ ಸಂಘದ ಕಚೇರಿಯಲ್ಲಿ ನಡೆದ 67ನೇ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಅವರು, 2026ರ ಮಾರ್ಚ್ 31ರ ಅಂತ್ಯಕ್ಕೆ ಸಂಘವು ಒಟ್ಟು 1,279 ಸದಸ್ಯರನ್ನು ಹೊಂದಿದ್ದು, ₹22,13,057 ಪಾಲು ಬಂಡವಾಳ ಹೊಂದಿದೆ ಎಂದರು.

ಸಂಘದ ಪಾಲು ಬಂಡವಾಳದಲ್ಲಿ ‘ಅ’ ವರ್ಗದ 12 ಸದಸ್ಯರಿಂದ ₹2,21,695, ‘ಬ’ ವರ್ಗದ 1,243 ಸದಸ್ಯರಿಂದ ₹10,62,005, ‘ಕ’ ವರ್ಗದ 23 ಸದಸ್ಯರಿಂದ ₹5,007 ಹಾಗೂ ‘ಡ’ ವರ್ಗದ ಒಬ್ಬ ಸದಸ್ಯರಿಂದ ₹9,24,350 ಸಂಗ್ರಹವಾಗಿದೆ ಎಂದು ವಿವರಿಸಿದರು.

2025-26ನೇ ಸಾಲಿನಲ್ಲಿ ಪಡಿತರ ಚಿಲ್ಲರೆ ವ್ಯವಹಾರದಲ್ಲಿ ₹77,54,320.98 ವಹಿವಾಟು ನಡೆಸಲಾಗಿದೆ. ಅಂತ್ಯೋದಯ ಕಾರ್ಡ್‌ದಾರರಿಗೆ ಆಹಾರ ಧಾನ್ಯ ವಿತರಣೆ ಕಾರ್ಯವನ್ನೂ ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದು ತಿಳಿಸಿದರು.

ಸಂಘದ ಸ್ವಂತ ಲಾಭದ ಹಣದಲ್ಲಿ ಆವರಣದಲ್ಲಿ 12 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಲಾಗಿದ್ದು, ಇದರಿಂದ ಸಂಘಕ್ಕೆ ನಿರಂತರ ಆದಾಯದ ಮೂಲ ಸೃಷ್ಟಿಯಾಗಿದೆ. ಸಂಘದ ಆದಾಯವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 10 ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಜಮಾ-ಖರ್ಚು ಪತ್ರಿಕೆಯಂತೆ ಆರ್‌ಡಿಸಿಸಿ ಬ್ಯಾಂಕ್ ಉಳಿತಾಯ ಖಾತೆ, ಎಸ್‌ಬಿಐ ಚಾಲ್ತಿ ಖಾತೆ ಹಾಗೂ ಕೆಎಸ್‌ಸಿಸಿ ಲಿಮಿಟೆಡ್ ರಾಯಚೂರು ಸೇರಿದಂತೆ ವಿವಿಧ ಖಾತೆಗಳ ಮೂಲಕ ಸಂಘದ ಹಣಕಾಸು ವ್ಯವಹಾರಗಳನ್ನು ನಿಯಮಾನುಸಾರ ನಡೆಸಲಾಗುತ್ತಿದೆ. ಲೆಕ್ಕಪರಿಶೋಧನಾ ವರದಿಗೆ ಸಂಬಂಧಿಸಿದಂತೆ ಸಂಪೂರ್ಣ ಪಾಲನಾ ವರದಿಯನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಎಲ್ಲ ಸದಸ್ಯರಿಗೆ ಷೇರು ಪ್ರಮಾಣಪತ್ರ ವಿತರಣೆ, ಮೀಸಲು ನಿಧಿಗೆ ಸಂಬಂಧಿಸಿದ ನಿಯಮಗಳ ಪಾಲನೆ ಹಾಗೂ ಸಹಕಾರ ಶಿಕ್ಷಣ ನಿಧಿ ಪಾವತಿ ಸೇರಿದಂತೆ ಅಗತ್ಯ ಅನುಪಾಲನಾ ಕ್ರಮಗಳನ್ನು ಕ್ರಮಬದ್ಧವಾಗಿ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿತು.

ಸಂಘದ ಅಭಿವೃದ್ಧಿಗೆ ಸಹಕಾರ ನೀಡಿದ ಗುಲಬರ್ಗಾ ಪ್ರಾಂತದ ಜಂಟಿ ನಿಬಂಧಕರು, ಉಪನಿಬಂಧಕರು, ಸಹಾಯಕ ನಿಬಂಧಕರು ಹಾಗೂ ರಾಯಚೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧಿಕಾರಿಗಳಿಗೆ ಅಧ್ಯಕ್ಷ ಶರಣಗೌಡ ಪಿ. ಮದರಕಲ್ ಮತ್ತು ವ್ಯವಸ್ಥಾಪಕ ಶರಣಬಸವ ವಿ. ಬಳೆ ಕೃತಜ್ಞತೆ ಸಲ್ಲಿಸಿದರು.

ರಾಜ್ಯ ಸರ್ಕಾರ ನೀಡುವ ಪಾಲು ಹಣಕ್ಕೆ ಸರಿಸಮನಾಗಿ ಸಂಘದ ಸದಸ್ಯರಿಂದಲೂ ಪಾಲು ಬಂಡವಾಳ ಸಂಗ್ರಹಿಸಬೇಕಿರುವುದರಿಂದ, ಸದಸ್ಯರು ಹೆಚ್ಚಿನ ಪಾಲು ಹಣ ನೀಡಿ ಸಂಘದ ಆರ್ಥಿಕ ಬಲವರ್ಧನೆ ಮತ್ತು ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶರಣಗೌಡ ಪಿ. ಮದರಕಲ್ ಮನವಿ ಮಾಡಿದರು.

ಸಭೆಯಲ್ಲಿ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ. ರಾಜಶೇಖರ ನಾಯಕ, ಸಂಘದ ನಿರ್ದೇಶಕರಾದ ಶರಣಗೌಡ ಕಮತಗಿ, ಪ್ರಕಾಶ ಪಾಟೀಲ್, ಮಲ್ಲಯ್ಯ ಬಿ. ಗಣೇಕಲ್, ಶಿವುಕುಮಾರ ಅಕ್ಕರಿಕಿ, ಪಿ. ಶರಣಪ್ಪ ಪರತಪುರ, ಪರ್ವತರೆಡ್ಡಿ ಪಾಟೀಲ್ ಶಾವಂತಗೇರಾ, ಸತೀಶ ಬಂಡೇಗುಡ್ಡ, ಚನ್ನವೀರಯ್ಯಸ್ವಾಮಿ ಅರಕೇರಾ, ನರಸಣ್ಣ ನಾಯಕ ಗಣಜಲಿ, ವ್ಯವಸ್ಥಾಪಕ ಶರಣಬಸವ ವಿ. ಬಳೆ, ಸಿಬ್ಬಂದಿಗಳಾದ ಸರಸ್ವತಿ ಎಸ್. ಹಿರೇಮಠ, ಮಂಜುನಾಥ, ಅಕ್ತರ ಹುಸೇನ್, ಗಂಗಣ್ಣ ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.